ಕೆಂಪೇಗೌಡ, ಫ.ಗು.ಹಳಕಟ್ಟಿ, ಹಡಪದ ಅಪ್ಪಣ್ಣ ಮತ್ತಿತರ ಜಯಂತಿಗಳ ಆಚರಣೆ
ಪೂರ್ವಸಿದ್ಧತೆಗೆ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಸೂಚನೆ

ಬೆಳಗಾವಿ, ಜೂ.23 : ಸರ್ಕಾರದ ಮಾರ್ಗಸೂಚಿ ಪ್ರಕಾರ ನಾಡಪ್ರಭು ಕೆಂಪೇಗೌಡ ಜಯಂತಿ, ಡಾ. ಫ.ಗು ಹಳಕಟ್ಟಿಯವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ, ಹಡಪದ ಅಪ್ಪಣ್ಣ ಹಾಗೂ ವಿವಿಧ ಜಯಂತಿ ಆಚರಣೆಯ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಿಗದಿತ ದಿನಾಂಕದಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ (ಜೂ.23) ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ, ಡಾ. ಫ.ಗು ಹಳಕಟ್ಟಿಯವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ, ಹಡಪದ ಅಪ್ಪಣ್ಣ ಹಾಗೂ ವಿವಿಧ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂನ್ 27 ರಂದು
ನಾಡಪ್ರಭು ಕೆಂಪೇಗೌಡ ಜಯಂತಿ, ಜುಲೈ 2 ರಂದು ಡಾ. ಫ.ಗು ಹಳಕಟ್ಟಿಯವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ, ಹಾಗೂ ಜುಲೈ 3 ರಂದು ಹಡಪದ ಅಪ್ಪಣ್ಣ ಜಯಂತಿ ಆಚರಣೆ ಮಾಡಲಾಗುವುದು. ನಗರದ ಕೋಟೆ ಕೆರೆಯಿಂದ ಕುಮಾರ ಗಂಧರ್ವ ಕಾಲಾ ಮಂದಿರದವರೆಗೆ ಮೆರವಣಿಗೆ ನಡೆಯಲಿದೆ ಬಳಿಕ ವೇದಿಕೆ ಕಾರ್ಯಕ್ರಮದ ಮೂಲಕ ಜಯಂತಿಗಳ ಆಚರಣೆ ಮಾಡಲಾಗುವುದು ಎಂದು ಹೇಳಿದರು.
ಜಯಂತಿಗಳ ಆಚರಣೆಗೆ ಅವಶ್ಯವಿರುವ ರೂಪರೇಷೆಗಳ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅದೇ ರೀತಿಯಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ, ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಕಲಾ ತಂಡಗಳು ಭಾಗವಹಿಸಲಿವೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಕೆ.ಟಿ ಶಾಂತಲಾ ಅವರು ತಿಳಿಸಿದರು.
ಫ.ಗು.ಹಳಕಟ್ಟಿಯವರ ವಚನ ಸಂಶೋಧನಾ ದಿನವನ್ನು ವಚನ ಶತಮಾನೋತ್ಸವ ವರ್ಷ ಎಂದು ಆಚರಿಸಬೇಕು ಎಂದು ಕೋರಿ ಸಮಾಜದ ಮುಖಂಡರು ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು, ನಾಡಪ್ರಭು ಕೆಂಪೇಗೌಡ ಜಯಂತಿ, ಡಾ. ಫ.ಗು ಹಳಕಟ್ಟಿಯವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ, ಹಾಗೂ ಹಡಪದ ಅಪ್ಪಣ್ಣ ಜಯಂತಿ ಆಚರಣೆಯ ಕಾರ್ಯಕ್ರಮದ ರೂಪರೇಷೆಗಳು ಮತ್ತು ಸಿದ್ಧತೆಗಳ ಕುರಿತು ವಿವರಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಸಮುದಾಯ ಮುಖಂಡರು ಸಭೆಯಲ್ಲಿ ಉಸ್ಥಿತರಿದ್ದರು.