Belagavi News In Kannada | News Belgaum

ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನ ರಚನೆಗೆ ಅಷ್ಟೇ ಸೀಮಿತವಾಗಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಮೈಸೂರು: ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಸಂವಿಧಾನ ರಚನೆಗೆ ಅಷ್ಟೇ ಸೀಮಿತಗೊಳಿಸಬೇಡಿ. ಹಿಂದೂ ಕೋಡ್‌ ಬಿಲ್‌ ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಅವಕಾಶ ನೀಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು…

 

 

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಸಂಶೋಧನಾ ವಿದ್ಯಾರ್ಥಿ ವೇದಿಕೆ
ಬಿ.ಎಂ.ಶ್ರೀ ಸಭಾಂಗಣದಲ್ಲಿ ವಿಶ್ವಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಆಧುನಿಕ ಭಾರತ ನಿರ್ಮಾಣಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಕೊಡುಗೆ ಅಪಾರವಿದೆ. ಸ್ತ್ರೀಯರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶ, ಕಾರ್ಮಿಕರಿಗಾಗಿ ಹಲವು ಕಲ್ಯಾಣ ಕಾರ್ಯಕ್ರಮ, 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷ ಣ, ಚುನಾವಣಾ ಆಯೋಗ ಸ್ಥಾಪನೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಸಮಾನತೆಯ ಸಮಾಜ ಹಾಗೂ ಆಧುನಿಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು..

 

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ವಿಚಾರಧಾರೆ, ಸಂದೇಶಗಳು ಮನೆ ಮನೆಗೂ ತಲುಪಬೇಕು. ದೇಶಕ್ಕಾಗಿ ಹಾಗೂ ರಾಷ್ಟ್ರದ ಎಲ್ಲಾ ವರ್ಗದ ಜನರ ಶ್ರೇಯೊಭಿವೃದ್ಧಿಗೆ ಮಾಡಿರುವ ಕಾರ್ಯಗಳ ಬಗ್ಗೆ ಮಾಹಿತಿ ಒದಗಿಸುವಂತಾಗಬೇಕು ಎಂದರು. ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎಂಬುದನ್ನು ಪ್ರತಿಪಾದಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು, ಶಿಕ್ಷ ಣ ಪಡೆದಾಗ ಸಮಾನ ಅವಕಾಶ ಮತ್ತು ಆರ್ಥಿಕ ಪ್ರಗತಿ ಸಾಧ್ಯ ಎಂಬುದನ್ನು ಪ್ರತಿಪಾದಿಸಿದ್ದರು ಎಂದು ನುಡಿದರು. .

ಸಂವಿಧಾನದಲ್ಲಿ ಮೂಲ ಹಕ್ಕು, ಕರ್ತವ್ಯ ಮತ್ತು ರಾಜ್ಯ ನಿರ್ದೇಶಕ ತತ್ತ್ವಗಳು ಜತೆಗೆ ಸಾಮಾಜಿಕ ಭದ್ರತೆ ಮತ್ತಿತರ ಅಂಶಗಳನ್ನು ಸೇರ್ಪಡೆ ಮಾಡಿ ಪ್ರಜಾಪ್ರಭುತ್ವ ಯಶಸ್ಸಿಗೆ ಶ್ರಮಿಸಿದ ಕೀರ್ತಿ ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ. ಇಂತಹ ಮಹಾನ್‌ ನಾಯಕನ ಜತೆ ಇನ್ನೂ ಅನೇಕರು ಸಮಾನತೆ ಮತ್ತು ಶಿಕ್ಷಣಕ್ಕಾಗಿ ಶ್ರಮಿಸಿದ್ದಾರೆ ಎಂದರು. .

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎನ್.ಕೆ. ಲೋಕನಾಥ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಪುರುಷೋತ್ತಮ ಬಿಳಮಲೆ, ಕನ್ನಡ ಲೇಖಕಿಯರ ಸಂಘ ಅಧ್ಯಕ್ಷರಾದ ಸರಸ್ವತಿ, ಕೆ.ಎ.ಎಸ್. ಕುಲಸಚಿವರು ವಿ.ಆರ್. ಶೈಲಜಾ, ನಿರ್ದೇಶಕರಾದ ಪ್ರೊ. ವಿಜಯಕುಮಾರಿ ಎಸ್.ಕರಿಕಲ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..