Belagavi News In Kannada | News Belgaum

ನೀರಿನ ವ್ಯವಸ್ಥೆ ಕಲ್ಪಿಸುವಂತೆ ಚನ್ನಮ್ಮ ವಸತಿ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೈಲಹೊಂಗಲ : ಒಂದು ಕಡೆ ಬಿಸಿಲಿನ ಧಗೆಯಿಂದ ಬಸವಳಿದರೆ ಇತ್ತ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದು ಕಲಿಕೆಗೆ ತೀವೃ ತೊಂದರೆಯಾಗಿದ್ದರ ವ್ಯವಸ್ಥೆಯ ವಿರುದ್ದ ಪ್ರತಿಭಟನೆಗಿಳಿದ ಘಟಣೆ ಶುಕ್ರವಾರ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಜರುಗಿದೆ.

ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ನಡೆಯುವ ಪಟ್ಟಣದ ಹೊರ ವಲಯದಲ್ಲಿನ ಬಾಲಕಿಯರ ಈ ವಸತಿ ಶಾಲೆಯಲ್ಲಿ ಪ್ರತಿವರ್ಷ ಸುಮಾರು 280 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಅಭ್ಯಸಿಸುತ್ತಿದ್ದು ಸಮರ್ಪಕ ನೀರಿಲ್ಲದ ಕಾರಣ ತುಂಬಾ ಪಡಿಪಾಟಲು ಅನುಭವಿಸಬೇಕಾಗಿದೆ.

ತುಂಬಾ ವಿಶಾಲವಾದ ಪ್ರದೇಶದಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು ಅಗತ್ಯ ಸೌಲಭ್ಯಗಳಿಂದ ಇಲ್ಲಿನ ವಿದ್ಯಾರ್ಥಿಗಳು ತೀರಾ ವಂಚಿತರಾಗುತ್ತಿದ್ದಾರೆ. ಸುಮಾರು ಎರಡು ವರ್ಷಗಳಿಂದ ಕುಡಿಯುವ ನೀರು ಸೇರಿದಂತೆ ವಿವಿಧ ಅಗತ್ಯತೆಗೆ ನೀರು ಸರಿಯಾಗಿ ಸಿಗದ ಕಾರಣ ಆಟ ಪಾಠಕ್ಕೆ ಸದಾ ಹಿನ್ನೆಡೆಯಾಗುತ್ತಿದೆ ಎಂಬುದು ಇಲ್ಲಿನ ವಿದ್ಯಾರ್ಥಿನಿಯರ ಗೋಳಾಗಿದೆ. ವಿದ್ಯಾರ್ಥಿನಿಯರಿಗೆ ಅನಾರೋಗ್ಯ ಉಂಟಾದಾಗ ಕೂಡಲೇ ಹಾರೈಕೆಗಾಗಿ ನರ್ಸಿಂಗ್ ಆಫಿಸರ್ (ಸ್ಟಾಪ್ ನರ್ಸ) ಕೂಡಾ ಇಲ್ಲಿ  ಇಲ್ಲದ್ದರಿಂದ ಮತ್ತಷ್ಟು ಸಮಸ್ಯಗಳು ಬಿಗಾಡಾಯಿಸುತ್ತಿವೆ.

ಬಹು ಸಂಖ್ಯೆಯ ಈ ಹಾಸ್ಟೇಲಿಗೆ ದಿನನಿತ್ಯ ಕೇವಲ 2 ರಿಂದ 3 ಟ್ಯಾಂಕರ ಮಾತ್ರ ನೀರು  ಬೇರೆ ಬೇರೆ ಕಡೆಯಿಂದ ಪೂರೈಸುತ್ತಿರುವದರಿಂದ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತಿದ್ದು ಹಲವಾರು ಸಮಸ್ಯಗಳನ್ನು ಎದುರಿಸಬೇಕಾಗಿದೆ. ಅಗತ್ಯತೆಗೆ ನೀರಿಲ್ಲದ ಕಾರಣ ಅಸ್ವಚ್ಚತೆ ಹಾಸ್ಟೇಲನಲ್ಲಿ ತಾಂಡವಾಡುತ್ತಿದ್ದು ಹಾಸ್ಟೇಲ ಬಿಟ್ಟು ಊರುಗಳಿಗೆ ಹೋಗಬೇಕೆಂದು ತಮ್ಮ ಸಹಾಯಕತೆಯನ್ನು ವಿದ್ಯಾರ್ಥಿಗಳು ಹೊರ ಹಾಕುತ್ತಿದ್ದಾರೆ.

ಓದಲು ಬೆಳಕಿನ ವ್ಯವಸ್ಥೆ ಸರಿ ಇಲ್ಲ. ಜನರೇಟರ ಕೆಟ್ಟು ನಿಂತಿದ್ದರಿಂದ ಕರೆಂಟ ಇಲ್ಲದೇ ಇದ್ದಾಗ ಕತ್ತಲೆಯಲ್ಲೇ ಕಾಲ ಕಳೆಯಬೇಕಾಗಿದ್ದು ನಮ್ಮ ಗೋಳು ಕೇಳುವವರ್ಯಾರು ಎಂಬಂತಾಗಿದೆ. ಸಮಸ್ಯೆಯ ಕುರಿತು ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳಿಗೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ಧೇಶಕರಿಗೆ, ಉಪವಿಭಾಗಾಧಿಕಾರಿಗೆ, ಪುರಸಭೆ ಅಧಿಕಾರಿಗಳಿಗೆ, ತಾಲೂಕಾ ಅಧಿಕಾರಿಗಳಿಗೆ ಮನವಿ ಪತ್ರ ಪದೇ ಪದೇ ಸಲ್ಲಿಸಿ ಗೋಗರೆದರೂ ಪರಿಹಾರ ಮಾತ್ರ ಶೂನ್ಯವಾಗಿದೆ.

ಸರಕಾರ ಕೋಟ್ಯಾಂತರ ಹಣ ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗಾಗಿ ವಸತಿ ನಿಲಯಗಳನ್ನು ನಿರ್ಮಾಣ ಮಾಡಿದ್ದು ಆದರೆ ಸರಕಾರ ಮೂಲಭೂತ ಸೌಲಭ್ಯ ಒದಗಿಸಲು ಮೈಮರೆತಂತಿದೆ ಎನ್ನಲಾಗಿದೆ. ವಿದ್ಯಾರ್ಥಿನಿಯರ ಸಮಸ್ಯೆಯನ್ನು ಈಡೇರಿಸದಿದ್ದರೆ ಊಟ ಮಾಡುವದಿಲ್ಲವೆಂದು ಪಟ್ಟು ಹಿಡಿದು ಪ್ರತಿಭಟಿಸಿದರು.

ಈ ಕುರಿತು ವಿದ್ಯಾರ್ಥಿನಿಯರು ಹಲವಾರು ಬಾರಿ ಸಮಸ್ಯೆಯ ಕುರಿತು ಅಧಿಕಾರಿಗಳ ಕಣ್ಣು ತೆರೆಸಿದರೂ ಕಾಟಾಚಾರಕ್ಕೆ ಎಂಬಂತೆ ಬೇಟಿ ನೀಡಿ ಭರವಸೆ ನೀಡುತ್ತಾರೆಯೇ ವಿನಹ: ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲವೆಂದು ಗಂಭೀರವಾದ ಆಪಾದನೆಗಳು ಕೇಳಿ ಬರುತ್ತಿವೆ. ಇನ್ನಾದರೂ ಎಚ್ಚೆತ್ತುಕೊಂಡು ವಿದ್ಯಾರ್ಥಿನಿಯರಿಗೆ ನೀರಿನ ಸಮಸ್ಯೆಯ ಪರಿಹಾರ ಕಂಡುಕೊಳ್ಳುತ್ತಾರೆಯೇ ಕಾದು ನೋಡುವಂತಾಗಿದೆ.
ಮೇಲಾಧಿಕಾರಿಗಳ ಆದೇಶದ ಮೇರೆಗೆ ವಸತಿ ನಿಲಯಕ್ಕೆ   ಬೇಟಿ ನೀಡಿದ ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಸಿ.ಬಿ.ಯಮನೂರ ವಿದ್ಯಾರ್ಥಿನಿಯರ ಸಮಸ್ಯೆಯನ್ನು ಆಲಿಸಿ ನೀರಿನ ಸಮಸ್ಯೆ ತೀವ್ರವಾದ ಕುರಿತು ಮನಗಂಡು ಪುರಸಭೆ ಅಧಿಕಾರಿಗಳೊಂದಿಗೆ ಮಾತನಾಡಿ, ಟ್ಯಾಂಕರ ಮೂಲಕ ನೀರು ಪೂರೈಕೆ ಮಾಡಿದರೂ ಅಲ್ಲದೇ ವಸತಿ ನಿಲಯಕ್ಕೆ 24/7 ನೀರು ಪೂರೈಕೆಗಾಗಿ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದಾಗ ಊಟ ಮಾಡಲು ಮುಂದಾದರು.

 ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ನನ್ನ ಗಮನಕ್ಕೆ ಬಂದಿದ್ದು, ಈಗಾಗಲೇ    ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಪರಿಹಾರಕ್ಕಾಗಿ  ಇಲಾಖೆಯಿಂದಲೂ ಪ್ರಯತ್ನಿಸಲಾಗುವದು.
ಬಿ. ಕಲ್ಲೇಶ
ಜಂಟಿ ನಿರ್ಧೇಶಕರು
ಸಮಾಜ ಕಲ್ಯಾಣ ಇಲಾಖೆ
ಬೆಳಗಾವಿ
——————————–
ಬಾಲಕಿಯರ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು ಬೋರವೆಲ್ ಕೊರೆಸುವ ಅಗತ್ಯವಿದೆ. ಈ ಕುರಿತು ಶಾಶ್ವತ ಪರಿಹಾರಕ್ಕೆ ಈಗಾಗಲೇ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಎಂ.ವಿ.ಕುಂಬಾರ
ಪ್ರಾಚಾರ್ಯರು
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ
ಬೈಲಹೊಂಗಲ