ಅಕ್ಷರಾಭ್ಯಾಸ ಜತೆಗೆ ಸಂಸ್ಕಾರ ಬೋಧಿಸುವುದು ಅಗತ್ಯ: ಬಿಇಒ ದಂಡಿನ್

ಹುಕ್ಕೇರಿ: ಶಿಕ್ಷಣದ ತಳಪಾಯ ಎಂದೇ ಕರೆಯಲ್ಪಡುವ ಪೂರ್ವ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಅಕ್ಷರಾಭ್ಯಾಸದ ಜೊತೆಗೆ ಸಂಸ್ಕಾರ ಬೋಧಿಸುವ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಮಂಗಳವಾರ ನಡೆದ ಮರಿಯಮ್ ಎಜ್ಯುಕೇಶನಲ್ ಆ್ಯಂಡ್ ವೆಲ್‌ಫೇರ್ ಸೊಸೈಟಿಯ ಶಾಹಿನ್ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲೆಗಳು ಕೇವಲ ಜ್ಞಾನಾರ್ಜನೆ ಮಾಡುವ ಕೇಂದ್ರಗಳಾಗದೇ ನೀತಿ, ಮೌಲ್ಯಗಳನ್ನು ಬೋಧಿಸುವ ಮಂದಿರಗಳಾಗಬೇಕು ಎಂದರು.
ಬಾಲ್ಯಾವಸ್ಥೆಯಲ್ಲಿ ಮಕ್ಕಳು ಹಿಂಸಾತ್ಮಕ ಪ್ರವೃತ್ತಿಯತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಪಾಲಕರು ಮತ್ತು ಶಿಕ್ಷಕರ ವರ್ತನೆ ಮತ್ತು ನಡುವಳಿಕೆಯೇ ಕಾರಣವಾಗಿದೆ. ಶಾಲೆಗಳಲ್ಲಿ ಜ್ಞಾನ ಬಿತ್ತುವ ಜತೆಗೆ ಜೀವನದ ನೀತಿ ಪಾಠ ಕಲಿಸುವಂತಾಗಬೇಕು. ಮಕ್ಕಳು ಪರಸ್ಪರ ಸಂಹಿಷ್ಣುತೆ, ಸೌಹಾರ್ದತೆ, ಸಹೋದರತೆಯಿಂದ ಕಲಿಕೆಯಲ್ಲಿ ಪಾಲ್ಗೊಳ್ಳಬೇಕು. ಹೊಸ ಶಿಕ್ಷಣ ನೀತಿಯಿಂದ ೩-೬ ವರ್ಷದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.
ಸ್ವಾಮಿ ವಿವೇಕಾನಂದ ಶಾಲೆಯ ಸಂಸ್ಥಾಪಕ ಅಶೋಕ ಪಾಟೀಲ ಮಾತನಾಡಿ, ಶಾಲಾ ಸಂಸ್ಥೆಗಳನ್ನು ಹುಟ್ಟುಹಾಕುವುದು ಸುಲಭ. ಆದರೆ, ಅವುಗಳನ್ನು ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸವಾಗಿದೆ. ಶಿಕ್ಷಣ ಕ್ಷೇತ್ರವನ್ನು ವ್ಯಾಪಾರೀಕರಣ, ಲಾಭದ ದಂಧೆಯನ್ನಾಗಿ ಮಾಡಿಕೊಳ್ಳದೇ ಜನಸೇವೆ ಎಂದು ತಿಳಿದುಕೊಳ್ಳಬೇಕು. ದೇಶದ ಭಾವಿ ಸತ್ಪçಜೆಗಳನ್ನು ರೂಪಿಸುವ ತಾಣವಾಗಬೇಕು ಎಂದರು.
ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷರೂ ಆದ ಪುರಸಭೆ ಹಿರಿಯ ಸದಸ್ಯ ಮಹಾವೀರ ನಿಲಜಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದ್ಯಮಿ ಪವನ ಕಣಗಲಿ, ಶೇಖ್ ಮೆಡಿಕಲ್ ಕಾಲೇಜಿನ ಉಪ ಪ್ರಾಚಾರ್ಯ ಡಾ.ನಜೀಬ್ ಪಟೇಲ್, ಸಂಕೇಶ್ವರ ವಿವೇಕಾನಂದ ಶಾಲೆಯ ಅಧ್ಯಕ್ಷ ಮಹೇಶ ದೇಸಾಯಿ, ಹಿರಿಯ ಮುಖಂಡರಾದ ನಜೀರಅಹ್ಮದ ಮೋಮಿನದಾದಾ, ಸಲೀಮ್ ನದಾಫ್, ಬಾಬಾಮೀಯಾ ಖಾಜಿ, ಇಲಿಯಾಸ ಅತ್ತಾರ, ಫಾರುಖ್ ಮುಲ್ಲಾ, ಬಿಆರ್‌ಸಿ ಎ.ಎಸ್.ಪದ್ಮಣ್ಣವರ, ಸಂಸ್ಥಾಪಕ ಇಕ್ಬಾಲ್‌ಅಹ್ಮದ ಮುಲ್ಲಾ, ಉಪಾಧ್ಯಕ್ಷ ಇರ್ಷಾದಅಹ್ಮದ ಮುಲ್ಲಾ, ನಿರ್ದೇಶಕರಾದ ಉಮರಫಾರುಖ್ ಮುಲ್ಲಾ, ನಿಯಾಜ್‌ಅಹ್ಮದ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಕ್ಷ ಅಬ್ದುಲ್‌ಕರಿಮ್ ಮಕಾನಾದರ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎಸ್.ಡಿ.ನಾಯಿಕ ನಿರೂಪಿಸಿದರು. ಕಾರ್ಯದರ್ಶಿ ಸಿಕಂದರ ಕಳಾವಂತ ವಂದಿಸಿದರು./////