ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವೇ ಇಲ್ಲ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ನಮ್ಮ ಸರ್ಕಾರದಲ್ಲಿ ವರ್ಗಾವಣೆ ಸೇರಿದಂತೆ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧಪಕ್ಷದಲ್ಲಿದ್ದಾಗ ನಾವು ಹಿಂದಿನ ಸರ್ಕಾರದ ಭ್ರಷ್ಟಾಚಾರ, ವರ್ಗಾವಣೆ ದಂಧೆಗಳ ಬಗ್ಗೆ ವ್ಯಾಪಕ ಚರ್ಚೆ ಮಾಡಿದ್ದೇವೆ.
ನಮ್ಮ ಸರ್ಕಾರದಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ. ದಕ್ಷ ಅಕಾರಿಗಳಿಗೆ ಸೂಕ್ತ ಸ್ಥಾನಗಳು ದೊರೆಯಲಿದೆ ಎಂದು ಹೇಳಿದರು.ಶಕ್ತಿ ಯೋಜನೆ ಜಾರಿಯ ಬಳಿಕ ಸಾರಿಗೆ ನಿಗಮಗಳಿಗೆ ಆರ್ಥಿಕ ಹೊರೆಯಾಗಿಲ್ಲ. ಮಹಿಳಾ ಪ್ರಯಾಣಿಕರ ಸಾರಿಗೆ ವೆಚ್ಚವನ್ನು ಸರ್ಕಾರ ಭರಿಸಲಿದೆ. ಹೀಗಾಗಿ ನಿಗಮಗಳಿಗೆ ಯಾವುದೇ ಆರ್ಥಿಕ ನಷ್ಟ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಿಗದಿತ ಕಾಲಮಿತಿಯೊಳಗಾಗಿಯೇ ಸಾರಿಗೆ ನಿಗಮಗಳ ನೌಕರರು ಹಾಗೂ ಅಕಾರಿಗಳಿಗೆ ವೇತನ ಪಾವತಿಯಾಗಲಿದೆ. ನಾವು ಯೋಜನೆ ಜಾರಿಗೊಳಿಸಿರುವುದು ನಷ್ಟ ಉಂಟುಮಾಡಲಲ್ಲ. ಪ್ರತಿಯೊಂದನ್ನೂ ಜವಾಬ್ದಾರಿಯುತವಾಗಿ ತೆಗೆದುಕೊಳ್ಳುತ್ತಿದ್ದೇವೆ. ಊಹಾತ್ಮಕವಾಗಿ ಟೀಕೆ ಮಾಡುವವರಿಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು./////