ಸ್ವಯಂ ಘೋಷಿತ, ನಕಲಿ ಪತ್ರಕರ್ತರಿಗೆ ಎಸ್ಪಿ ಎಚ್ಚರಿಕೆ

ಹುಕ್ಕೇರಿ : ಯುಟ್ಯೂಬ್, ವೆಬ್ ಚಾನಲ್, ಆ್ಯಪ್ ಹೆಸರಲ್ಲಿ ಜೊಳ್ಳು, ಸ್ವಯಂ ಘೋಷಿತ ಮತ್ತು ನಕಲಿ ಪತ್ರಕರ್ತರ ಉಪಟಳ ಹೆಚ್ಚಾಗಿರುವ ಸಾಕಷ್ಟು ದೂರುಗಳಿದ್ದು ಪತ್ರಕರ್ತರ ಮುಖವಾಡ ಧರಿಸಿ ಅಕ್ರಮ, ಅನಧಿಕೃತ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸಂಜೀವ ಪಾಟೀಲ ಎಚ್ಚರಿಸಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರ ಸಂಘದ ತಾಲೂಕು ಘಟಕ ವಿವಿಧ ಪತ್ರಕರ್ತರ ಸಂಘಟನೆಗಳು ಹಾಗೂ ಕೆಲವು ಹಿರಿಯ ಪತ್ರಕರ್ತರ ನಿಯೋಗ ಮತ್ತು ಪತ್ರಿಕಾ ಸಂಪಾದಕರ ಯುಗಳ ಅಹವಾಲು ಆಲಿಸಿ ಬಳಿಕ ಮಾತನಾಡಿದ ಅವರು, ಸಮಾಜ ಮತ್ತು ಸರ್ಕಾರದ ನಡುವಿನ ಕೊಂಡಿಯಂತಿರುವ ಪತ್ರಿಕೋದ್ಯಮಕ್ಕೆ ಇಂದು ಕೆಲವರಿಂದ ಕಳಂಕ ತರುವ ಕೆಲಸ ನಡೆದಿದ್ದು ಬೋಗಸ್, ನಕಲಿ ಪತ್ರಕರ್ತರಿಗೆ ಬ್ರೇಕ್ ಹಾಕಲು ಸಂಬಂಧಿಸಿದ ಠಾಣೆಗಳಿಗೆ ಸೂಚಿಸಲಾಗುವುದು ಎಂದರು.
ಡಿಜಿಟಲ್ ಮೀಡಿಯಾ ಈಗ ಹೆಚ್ಚು ಚಾಲ್ತಿಯಲ್ಲಿದೆ. ಹಾಗಂತ ಇದುವೇ ಸರ್ವಶ್ರೇಷ್ಠವೂ ಅಲ್ಲ. ನಾಳೆ ಮತ್ತೊಂದು ಬರಬಹುದು. ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಯುಟ್ಯೂಬ್, ವೆಬ್ ಚಾನಲ್, ಆ್ಯಪ್ ಹೆಸರಿನ ಸ್ವಯಂ ಘೋಷಿತ ಪತ್ರಕರ್ತರ ಕಾಟ ವಿಪರೀತ ಹೆಚ್ಚಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಹದ್ದು ಮೀರಿ ವರ್ತಿಸಿದ ಘಟನೆಗಳಾಗಿವೆ. ಪತ್ರಕರ್ತರ ಮುಖವಾಡ ಧರಿಸಿ ಸಮಾಜ ಮತ್ತು ಸರ್ಕಾರಕ್ಕೆ ಕಂಟಕಪ್ರಾಯ ಎನಿಸಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವೃತ್ತಿಯಲ್ಲಿ ಘನತೆ, ನಡವಳಿಕೆ ಹಾಗೂ ತಮ್ಮನ್ನು ತಾವೇ ಸ್ವಯಂ ವಿಮರ್ಶೆಗೊಳಿಸಿಕೊಳ್ಳುವ ಬದ್ಧತೆ ಪತ್ರಕರ್ತನಿಗಿರಬೇಕು. ವೃತ್ತಿಯಲ್ಲಿ ಪಾವಿತ್ರ್ಯ ಹಾಗೂ ನೈತಿಕತೆಯನ್ನು ಉಳಿಸಿಕೊಂಡಲ್ಲಿ ಮಾತ್ರ ಪತ್ರಕರ್ತನಿಗೆ ಸಮಾಜದಲ್ಲಿ ಗೌರವ ಸಿಗುತ್ತದೆಯೇ ಹೊರತು, ಬ್ಲಾ್ಯಕ್‌ಮೇಲ್ ಹಾಗೂ ಬೆದರಿಕೆಗಳಿಂದ ಗೌರವ ಮನ್ನಣೆಗಳು ಸಿಗುವುದಿಲ್ಲ ಎಂದು ಅವರು ಹೇಳಿದರು.
ಪತ್ರಕರ್ತರು ಅತಿ ಬುದ್ಧಿವಂತರು ಎಂಬ ಭ್ರಮೆಯಿಂದ ಹೊರಬರಬೇಕು. ಹಣ, ಸ್ವಾಭಿಮಾನದ ಹಿಂದೆ ಬಿದ್ದರೆ ಸಾಧನೆ ಸಾಧ್ಯವಿಲ್ಲ. ಕೆಲಸದ ಹಿಂದೆ ಬಿದ್ದರೆ ಎಲ್ಲವೂ ಸಿಗುತ್ತದೆ.
ಪತ್ರಕರ್ತರಾದವರು ಹೊಸ ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕು. ಪತ್ರಿಕೋದ್ಯಮದ ಅನೇಕ ಸವಾಲುಗಳನ್ನು ಎದುರಿಸುವ ಜಾಣ್ಮೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಈ ಕ್ಷೇತ್ರದಲ್ಲಿ ಉಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ವೇಣುಗೋಪಾಲ, ಡಿಎಸ್ಪಿ ಡಿ.ಎಚ್.ಮುಲ್ಲಾ, ಸಿಪಿಐ ಎಂ.ಎಂ.ತಹಶೀಲ್ದಾರ, ಪಿಎಸ್‌ಐಗಳಾದ ಜೆ.ಡಿ.ನರಸಿಂಹರಾಜು, ರಾಜು ಮಮದಾಪುರ, ಎಸ್.ಎಚ್.ಪವಾರ, ಪತ್ರಕರ್ತರಾದ ಪಿ.ಜಿ.ಕೊಣ್ಣೂರ, ಬಾಬು ಸುಂಕದ, ಸಂಜು ಮುತಾಲಿಕ, ಚೇತನ ಹೊಳೆಪ್ಪಗೋಳ, ರವಿ ಕಾಂಬಳೆ, ವಿಶ್ವನಾಥ ನಾಯಿಕ ಮತ್ತಿತರರು ಉಪಸ್ಥಿತರಿದ್ದರು.