Belagavi News In Kannada | News Belgaum

ಬಿಜೆಪಿ ಒಂದು ಪಂಚೆಯೊಳಗೆ ಬಂಧಿಯಾಗಿ ವಿಲವಿಲ ಒದ್ದಾಡುತ್ತಿದೆ: ಕಾಂಗ್ರೆಸ್‌ ವ್ಯಂಗ್ಯ

ಬೆಂಗಳೂರು: ಕರ್ನಾಟಕದ ವಿಧಾನಸಭೆಯಲ್ಲಿನ ಹೀನಾಯ ಸೋಲಿನಿಂದ ಬಿಜೆಪಿ ಒಡೆದ ಮನೆಯಂತಾಗಿದೆ. ಬಿಜೆಪಿಯ ಕೆಲ ಮುಖಂಡರು ತಮ್ಮದೇ ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ( ಸಂಘಟನೆ ) ಬಿಎಲ್‌ ಸಂತೋಷ್‌ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.

ಈ ಕುರಿತಾಗಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ‘ಇಡೀ ಬಿಜೆಪಿ ಒಂದು ಪಂಚೆಯೊಳಗೆ ಬಂಧಿಯಾಗಿ ವಿಲವಿಲ ಒದ್ದಾಡುತ್ತಿದೆ. ಬಂಧನದಿಂದ ಹೊರಬರಬೇಕು ಎಂದರೆ ಆ “ಪಂಚೆ”ಯನ್ನು ಹರಿಯಲೇಬೇಕು’ ಎಂದು ವ್ಯಂಗ್ಯವಾಡಿದೆ.

ದುಡಿಯದೆ, ಬೆವರು ಹರಿಸದೆ, ತಿರುಗದೆ, ನಾಲ್ಕು ಮತವನ್ನು ಗಳಿಸುವ ಶಕ್ತಿಯೂ ಇಲ್ಲದ ಆ ‘ಸಂಘ’ಟನಾ ಕಾರ್ಯದರ್ಶಿಯ ವಿರುದ್ಧ ಮಾತನಾಡಿದ ಒಬ್ಬೇ ಒಬ್ಬ ವ್ಯಕ್ತಿ ಅಂದರೆ ರೇಣುಕಾಚಾರ್ಯ. ಬಿಜೆಪಿಯಲ್ಲಿ ಅವರು ಬದುಕುಳಿಯಲು ಸಾಧ್ಯವೇ ಎಂದು ಕಾದು ನೋಡಬೇಕು ಎಂದೂ ಕಾಂಗ್ರೆಸ್‌ ಟೀಕಿಸಿದೆ.

‘ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತು ಗೆಲ್ಲಲಾಗದ ದೊಣ್ಣೆನಾಯಕರೊಬ್ಬರು ಖSSನ ದೊಣ್ಣೆ ತೋರಿಸಿ ಇಡೀ ಬಿಜೆಪಿಯನ್ನು ಅಲ್ಲಾಡಿಸುತ್ತಿದ್ದಾರೆ. ಬಿಎಲ್‌ ಸಂತೋಷ್‌ ಅವರೇ, ರೇಣುಕಾಚಾರ್ಯರ ಈ ಮಾತನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ದಿಸಿ ಗೆದ್ದು ತೋರಿಸಿ. ನಿಮ್ಮ ದಮ್ಮು ತಾಕತ್ತು ನಿರೂಪಿಸಿ’ ಎಂದೂ ಕಾಂಗ್ರೆಸ್ ಸವಾಲು ಹಾಕಿದೆ.//////