ಶೀಘ್ರ 4 ಸಾವಿರ ಪೊಲೀಸ್ ಕಾಸ್ಟೇಬಲ್, 400 ಪಿಎಸ್‌ಐ ಹುದ್ದೆ ಭರ್ತಿಗೆ ಕ್ರಮ: ಜಿ. ಪರಮೇಶ್ವರ್

ಮೈಸೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆ ಖಾಲಿ ಇದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಲಿ ಹುದ್ದೆಗಳ ಭರ್ತಿ ಮಾಡುವ ಕಾರ್ಯ ಶುರುವಾಗಿದೆ. ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆ ಖಾಲಿ ಇದೆ. ಮೊದಲ ಹಂತದಲ್ಲಿ 4 ಸಾವಿರ ಪೊಲೀಸ್ ಕಾಸ್ಟೇಬಲ್, 400 ಪಿಎಸ್‌ಐ ಹುದ್ದೆ ಭರ್ತಿ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಸೈಬರ್ ಕ್ರೈಮ್ ಹಾಗೂ ಫೇಕ್ ನ್ಯೂಸ್ ತಡೆಗಟ್ಟಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಸೈಬರ್ ಕ್ರೈಮ್ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲೂ ಸೈಬರ್ ಕ್ರೈಮ್ ಸಂಖ್ಯೆ ಹೆಚ್ಚಳವಾಗಿದೆ. ಸೈಬರ್ ಕ್ರೈಮ್ ತಡೆಯಲು ಕಾಯಕಲ್ಪ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸೈಬರ್ ವಿಭಾಗವನ್ನು ಹೆಚ್ಚು ಕ್ರಿಯಾಶೀಲಗೊಳಿಸುತ್ತೇವೆ. ಜೊತೆಗೆ ಫೇಕ್ ನ್ಯೂಸ್ ಬೇರೆ ಬೇರೆ ರೀತಿಯಲ್ಲಿ ಹಾಕುತ್ತಿದ್ದಾರೆ. ರಾಜಕೀಯವಾಗಿ, ಸಮಾಜದ ಶಾಂತಿ ಕದಡಲು ಫೇಕ್ ನ್ಯೂಸ್ ಹಾಕುತ್ತಿದ್ಧಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಫೇಕ್ ನ್ಯೂಸ್ ತಡೆಗೆ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಔರಾದ‌್ಕರ್ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಆದರೆ, ಅದರಲ್ಲಿನ ಕೆಲ ಅಂಶಗಳನ್ನು ಸರ್ಕಾರ ಪರಿಗಣಿಸಿ ಜಾರಿಗೆ ತರಲಾಗುವುದು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಾರದ ರಜೆ ನೀಡುವ ಬಗ್ಗೆ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದರು.
ಮೈಸೂರು-ಬೆಂಗಳೂರು ರಸ್ತೆಯಲ್ಲಿನ ಮಂಡ್ಯ ಸಮೀಪ ನಡೆದಿರುವ ದರೋಡೆ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ಅಡಿಯಲ್ಲಿ ಟೋಲ್ ಸಂಗ್ರಹ ಬರುವುದಿಲ್ಲ. ಕೇಂದ್ರ ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ. ನಾವು ಸಹ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು ಟೋಲ್ ಸಂಗ್ರಹ ದರದಲ್ಲಿ ಕಡಿತ ಗೊಳಿಸಬೇಕೆಂದು ಬೇಡಿಕೆ ಇಟ್ಟಿದ್ದೇವೆ ಎಂದು ಹೇಳಿದರು./////