Belagavi News In Kannada | News Belgaum

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಸಚಿವ ಸತೀಶ್‌ ಜಾರಕಿಹೊಳಿ

ಹುಕ್ಕೇರಿ: ಸಸಿ ನೆಟ್ಟು ಪೋಷಿಸುವುದು ಕೇವಲ ಅರಣ್ಯ ಇಲಾಖೆ ಕೆಲಸ ಮಾತ್ರವಲ್ಲ. ಇತರೆ ಇಲಾಖೆಗಳು ಹಾಗೂ ಸಾರ್ವಜನಿಕರು ಕೈಜೋಡಿಸುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ತಾಲೂಕಿನ ಹಿಡಕಲ್ ಡ್ಯಾಮ್ ಬಳಿಯ ಚಿಲಭಾಂವಿ ಕ್ರಾಸ್ ಹತ್ತಿರ ಶನಿವಾರ ವನಮಹೋತ್ಸವ-2023 ಕರ್ನಾಟಕ ರಾಜ್ಯಾದ್ಯಂತ ಒಂದು ಕೋಟಿ ಸಸಿ ನೆಡುವ ಸಪ್ತಾಹ ಕಾರ್ಯಕ್ರಮದ ಭಾಗವಾಗಿ ಏರ್ಪಡಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ರಾಜ್ಯಾದ್ಯಂತ ಸಸಿ ನೆಡುವ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ನಿಗದಿತ ಸಸಿ ನೆಟ್ಟು ಪೋಷಿಸಬೇಕು. ಈ ಕಾರ್ಯದಲ್ಲಿ ಇತರೆ ಇಲಾಖೆಗಳ ಸಹಕಾರವು ಅಗತ್ಯವಿದೆ. ಪ್ರತಿವರ್ಷ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. 

ಯಮಕನಮರಡಿ ವಿಧಾನಸಭೆ ಕ್ಷೇತ್ರ ಸೇರಿದಂತೆ ಹುಕ್ಕೇರಿ ತಾಲೂಕಿನಲ್ಲಿ ಸುಮಾರು 21,000 ವಿವಿಧ ಜಾತಿಯ ಸಸಿಗಳನ್ನು ನೀಡಲಾಗುತ್ತಿದೆ. ಸರಕಾರಿ ಗೋಮಾಳ, ಗಾಯರಾಣ, ಸರ್ಕಾರಿ ಇಲಾಖೆಗಳ ಕಚೇರಿ ಆವರಣ ಹಾಗೂ ಸಾರ್ವಜನಿಕರು ತಮ್ಮ ಜಾಗಗಳಲ್ಲಿ ಸಸಿ ನೆಡಬೇಕು ಎಂದು ಅವರು ಹೇಳಿದರು. 

ಜಿಲ್ಲಾಧಿಕಾರಿ ಡಾ. ನಿತೇಶ್ ಪಾಟೀಲ್, ಎಸ್ಪಿ ಡಾ.ಸಂಜೀವ್ ಪಾಟೀಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ್ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್, ತಹಸಿಲ್ದಾರ್ ಸಂಜಯ್ ಇಂಗಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ಆರ್‌ಎಫ್‌ಒಗಳಾದ ಪ್ರಸನ್ ಬೆಲ್ಲದ, ಮಹಾಂತೇಶ್ ಸಜ್ಜನ್, ಬಿಇಒ ಮೋಹನ್ ದಂಡಿನ್ ಮತ್ತಿತರರು ಉಪಸ್ಥಿತರಿದ್ದರು./////