Belagavi News In Kannada | News Belgaum

ನಿಖಿತಾ ಗಂಜೀಗಟ್ಟಿ, ಪ್ರಧಾನಮಂತ್ರಿಯಾಗಿ, ಆನಂದಪ್ರಭು ದೇವರಮನಿ ಉಪಪ್ರಧಾನಮಂತ್ರಿಯಾಗಿ ಹಾಗೂ ನಾಜಮೀನ ಧಾರವಾಡ ಸಾಂಸ್ಕೃತಿಕ ಮಂತ್ರಿಯಾಗಿ ಆಯ್ಕೆ

ವಿಜಯನಗರದಲ್ಲಿನ ಸಿಟಿ ಹೈಸ್ಕೂಲ್ ನಲ್ಲಿ ಶಾಲಾ ಸಂಸತ್ ರಚನಾ ಪ್ರಕ್ರಿಯೆ ನಡೆಯಿತು

ಹುಬ್ಬಳ್ಳಿ; ನಗರದ ವಿಜಯನಗರದಲ್ಲಿನ ಸಿಟಿ ಹೈಸ್ಕೂಲ್ ನಲ್ಲಿ ಶಾಲಾ ಸಂಸತ್ ರಚನಾ ಪ್ರಕ್ರಿಯೆ ನಡೆಯಿತು. ಶಾಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಚುನಾವಣಾ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮತದಾನ ಮಾಡುವ ಮೂಲಕ ತಮ್ಮ ಸ್ನೇಹಿತರು ಕೂಡ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದರು.
ಕೇಲ ದಿನಗಳಿಂದ ಶಾಲಾ ಸಂಸತ್ ರಚನೆ ಮಾಡಿಕೊಳ್ಳಲು ಚುನಾವಣಾ ಪ್ರಕ್ರಿಯೆಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶಾಲೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ತಾವು ತಯಾರಿಸಿಕೊಂಡಿರುವ ಅಜೆಂಡಾವನ್ನು ಇತರೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು ಮತ ನೀಡುವಂತೆ ಮತಯಾಚಿಸಿದರು. ಶಾಲಾ ಆವರಣದಲ್ಲಿ ಸೇರಿದ್ದ ಮಕ್ಕಳು ಸಾಲುಗಟ್ಟಿ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.

ನಿಖಿತಾ ಗಂಜೀಗಟ್ಟಿ, ಪ್ರಧಾನಮಂತ್ರಿಯಾಗಿ, ಆನಂದಪ್ರಭು ದೇವರಮನಿ ಉಪಪ್ರಧಾನಮಂತ್ರಿಯಾಗಿ ಹಾಗೂ ನಾಜಮೀನ ಧಾರವಾಡ ಸಾಂಸ್ಕೃತಿಕ ಮಂತ್ರಿಯಾಗಿ ಆಯ್ಕೆಯಾದರು.

10ನೇ ತರಗತಿ ವಿದ್ಯಾರ್ಥಿನಿ ನಿಖಿತಾ ಗಂಜಿಗಟ್ಟಿ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ನಂತರ ಮಾತನಾಡಿ ಚುನಾವಣೆ ಎಂಬುದು ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ರಚನೆ ಮಾಡಿಕೊಳ್ಳಲು ನಡೆಯುವಂತಹ ಪ್ರಕ್ರಿಯೆ. ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿಟ್ಟು, ಸಮಾಜದಲ್ಲಿನ ಎಲ್ಲಾ ಜಾತಿ ವರ್ಗದ ಜನರನ್ನು ಸಮಾನವಾಗಿ ಕಾಣುವಂತಹ ವ್ಯಕ್ತಿಗೆ ಮತ ಚಲಾಯಿಸಬೇಕು’ ಎಂದರು.

ಒಂದು ವೇಳೆ ಸ್ಪರ್ಧಿಗಳಲ್ಲಿ ಯಾರೂ ಇಷ್ಟವಿಲ್ಲದೇ ಹೋದರೆ ನೋಟಾ ಬಟನ್ ಒತ್ತುವ ಮೂಲಕ ಮತ ಚಲಾಯಿಸುವ ಮೂಲಕ ಸಂವಿಧಾನದಲ್ಲಿ ಕೊಟ್ಟಿರುವ ಹಕ್ಕುಗಳನ್ನು ಚಲಾಯಿಸಬೇಕು. ಮತದಾನವೆಂದರೆ ಹಣ ತೆಗೆದುಕೊಂಡು ಮತದಾನ ಮಾಡುವುದಲ್ಲ. ಅದು ನಮ್ಮ ಹಕ್ಕಾಗಿದೆ. ಭ್ರಷ್ಟಾಚಾರ ಮುಕ್ತವಾಗಿ ಚುನಾವಣೆಯಾಗಬೇಕು. ಈ ನಿಟ್ಟಿನಲ್ಲಿ ನಮಗೆ ಚುನಾವಣೆ ಹೇಗೆ ನಡೆಯುತ್ತದೆ, ನಾವು ಹೇಗೆ ಮತದಾನ ಮಾಡಬೇಕು, ಎಂದೆಲ್ಲಾ ಕಲಿಸಿದ್ದಾರೆ. ನಾವು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂದು ಘೋಷಿಸಿದರು.

10ನೇ ತರಗತಿ ವಿದ್ಯಾರ್ಥಿ ಆನಂದಪ್ರಭು ದೇವರಮನಿ ಉಪಪ್ರಧಾನಮಂತ್ರಿ ಆಗಿ ಆಯ್ಕೆಯಾದ ನಂತರ
ಮಾತನಾಡಿ, ದೇಶದ ಅಭಿವೃದ್ಧಿಗಾಗಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಜನರು ಮತ ಚಲಾಯಿಸುತ್ತಾರೆ. ಅದೇ ರೀತಿ ನಮ್ಮಲ್ಲಿ ಇಂದು ಮತ ಚಲಾವಣೆ ನಂತರ ನನ್ನನ್ನ ಉಪಪ್ರಧಾನಮಂತ್ರಿಯನ್ನಾಗಿ ಮಾಡಿದ್ದು ಸಂತಸವಾಗಿದೆ. ಎಲ್ಲರೂ ಸೇರಿಕೊಂಡು ನಮ್ಮ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.

ನಾಜಮೀನ ಧಾರವಾಡ ಸಾಂಸ್ಕೃತಿಕ ಮಂಡಳಿ ಮಂತ್ರಿಯಾಗಿ ಆಯ್ಕೆಯಾದರು‌.
ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಪಿ ಎಚ್ ಪೂಜಾರ ಗುರುಗಳು ಚುನಾವಣೆಯ ಎಲ್ಲ ಜವಾಬ್ದಾರಿ ತೆಗೆದುಕೊಂಡು ಮಕ್ಕಳಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಚುನಾವಣೆ ನಡೆಸಿ ಮಕ್ಕಳಲ್ಲಿ ಈಗಿಂದಲೇ ಚುನಾವಣೆ ಬಗ್ಗೆ ಹಾಗೂ ಎಂತಹ ವ್ಯಕ್ತಿಯನ್ನು ಆಯ್ಕೆಮಾಡಬೇಕು ಎಂದು ಮನವರಿಕೆ ಮಾಡಿದರು.

ಶಾಲಾ ಮುಖ್ಯ ಗುರುಮಾತೆಯರಾದ ಶ್ರೀಮತಿ ವಿ.‌ಡಿ ಜೋಶಿ ಮಾತನಾಡಿ,
ಇಲಾಖೆಯ ನಿಯಮದಂತೆ ಶಾಲೆಯಲ್ಲಿ ಶಾಲಾ ಸಂಸತ್ ರಚನೆ ಮಾಡಬೇಕಾಗಿದೆ. ಚುನಾವಣೆಗಳನ್ನು ಏಕೆ ಮಾಡುತ್ತಾರೆ, ಹೇಗೆ ನಡೆಯುತ್ತವೆ, ಚುನಾವಣೆಯಲ್ಲಿ ಆಯ್ಕೆಯಾಗಿ ಬರುವವರು ಮಾಡಬೇಕಾಗಿರುವ ಕೆಲಸಗಳೇನು ಎನ್ನುವ ಕುರಿತು ಮಾಹಿತಿ ಅಗತ್ಯ ತರಬೇತಿ ಮತ್ತು ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.

ಈ ಸಮಯದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಡಿ ಬಿ.ಪಾಟೀಲ್, ಶಿಕ್ಷಕರಾದ ಪಿ.ಎಚ್ ಪೂಜಾರ, ರಮೇಶ ಇಟಗೋಣಿ, ಎಸ್.ಎಸ್. ಗೌರಿ, ಸುಮಾ ಪಾಟೀಲ್, ಅಜಯ ಜಯರಾಮ್ನವರ, ಸವಿತಾ ಕೌತಾಳ, ಸಂಗೀತಾ ಬಿ, ಶೋಭಾ ಮಂಡ್ಯಾಳ ,ಶ್ರೀವತ್ಸ ಮುಳಗುಂದ, ಸಂತೋಷ ಭಜಂತ್ರಿ, ಚನಬಸಮ್ಮ ಜಟ್ಟೆಪ್ಪನವರ ಸೇರಿದಂತೆ ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.