Belagavi News In Kannada | News Belgaum

ಎಷ್ಟೇ ಕಷ್ಟ ಬಂದರೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜಾತಿಗಣತಿಯನ್ನು ಪಡೆಯಬೇಡ ಎಂದು ಆಗ ಪುಟ್ಟರಂಗಶೆಟ್ಟಿಯವರಿಗೆ ಹೇಳಿದ್ದೇ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು. ಆದರೆ ನಾವು ಜಾತಿಗಣತಿ ವರದಿಯನ್ನು ಸ್ವೀಕರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು. ಎಲ್ಲಾ ಶೋಷಿತ ಸಮುದಾಯಗಳಿಗೂ ಮಹಾಸಂಸ್ಥಾನ ಆಗಬೇಕು ಎಂಬ ಉದ್ದೇಶದಿಂದ ಕಾಗಿನೆಲೆ ಮಹಾಸಂಸ್ಥಾನವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಇದು ಕೇವಲ ಒಂದು ಜಾತಿ ಅಥವಾ ಸಮಾಜದ ಮಠವಲ್ಲ, ಎಲ್ಲಾ ಶೋಷಿತ ಸಮಾಜಗಳಿಗೆ ಸೇರಿದ ಮಹಾ ಸಂಸ್ಥಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶೋಷಿತ ಸಮುದಾಯಗಳಿಗೆ ಧ್ವನಿ ಆಗುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯವನ್ನು ಒಟ್ಟಾಗಿಸಿ ಮಹಾಸಂಸ್ಥಾನಕ್ಕೆ ನಾಂದಿ ಹಾಡಲಾಯಿತು. ಮೊದಲ ಸ್ವಾಮೀಜಿ ತಾರಕಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಸಾಮಾಜಿಕ ಚಟುವಟಿಕೆ ಮಾಡಿಕೊಂಡು ಬರುತ್ತಿತ್ತು. ಈಗ ನಿರಂಜನಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಎಂದಿದ್ದಾರೆ.

ನಾವು ಚುನಾವಣೆ ವೇಳೆ ನೀಡಿರುವ 5 ಗ್ಯಾರಂಟಿಗಳನ್ನು ಎಷ್ಟೇ ಕಷ್ಟ ಬಂದರೂ ಜಾರಿ ಮಾಡುತ್ತೇವೆ. ಯಾರೇ ಆಡಿಕೊಂಡರೂ ಈ ವರ್ಷದ ಬಜೆಟ್‍ನಲ್ಲೇ 5 ಘೋಷಣೆಗಳಿಗೂ ಹಣ ಕೊಡುತ್ತೇವೆ. ನಮ್ಮ ಘೋಷಣೆಗಳು ಜಾತಿ-ಧರ್ಮ ಮೀರಿರುವಂತಹ ಘೋಷಣೆಗಳಾಗಿದೆ. ಎಲ್ಲಾ ಜನಾಂಗದ ಬಡವರು ಮತ್ತು ಮಧ್ಯಮ ವರ್ಗದವರು ಬಹಳ ಸಂಕಷ್ಟದಲ್ಲಿದ್ದಾರೆ. ಇವರ ಸಂಕಷ್ಟ ನಿವಾರಣೆಗಾಗಿ ಈ ಘೋಷಣೆಗಳನ್ನು ಈಡೇರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ನಾನು ಅಧಿಕಾರದಲ್ಲಿ ಇರುವವರೆಗೂ ಶೋಷಿತ ಜಾತಿಗಳಿಗೆ, ದಲಿತ ಸಮುದಾಯಗಳಿಗೆ, ಅಲ್ಪ ಸಂಖ್ಯಾತ ಸಮುದಾಯಗಳು ಹಾಗೂ ಎಲ್ಲಾ ಜಾತಿಯ ಬಡವರ ಏಳಿಗೆಗೆ ಶ್ರಮಿಸುತ್ತೇನೆ. ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ. ಆದರೆ ಕೊನೆಯವರೆಗೂ ರಾಜಕಾರಣದಲ್ಲಿ ಕ್ರಿಯಾಶೀಲವಾಗಿರುತ್ತೇನೆ. ಬಡವರ ಪರ ರಾಜಕಾರಣ, ಹೋರಾಟ ಮುಂದುವರೆಸುತ್ತೇನೆ. ಈ ಸಲುವಾಗಿ ಹೋರಾಡುತ್ತೇನೆ ಎಂದು ಭರವಸೆ ಎಂದಿದ್ದಾರೆ.

ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಶಾಖಾ ಮಠದ ನಿರ್ಮಾಣಕ್ಕೆ ನಾವು ಸರ್ಕಾರದ ಅನುದಾನ ಕೇಳುವುದಿಲ್ಲ. ಮಠ ನಿರ್ಮಾಣಕ್ಕೆ ಸಮಾಜದ ಬೆವರು ಮತ್ತು ಶ್ರಮ ಸಾಕು ಎಂದರು. ಈ ಸಂದರ್ಭದಲ್ಲಿ ಸಚಿವರಾದ ಭೈರತಿ ಸುರೇಶ್ ಅವರು ಶ್ರೀಮಠದ ನಿರ್ಮಾಣಕ್ಕೆ ವೈಯುಕ್ತಿಕವಾಗಿ 50 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು. ಬಳಿಕ ಹಲವರು ತಮ್ಮ ತಮ್ಮ ಶಕ್ತಿಯನುಸಾರ 50 ಸಾವಿರ ರೂ.ನಿಂದ 25 ಲಕ್ಷ ರೂ.ವರೆಗೂ ನೆರವನ್ನು ಘೋಷಿಸಿದರು.

ಕಾರ್ಯಕ್ರಮದಲ್ಲಿ ಮಹಾಸಂಸ್ಥಾನದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳಯ, ಶಾಖಾ ಮಠದ ಈಶ್ವರಾನಂದಪುರಿ ಮಹಾಸ್ವಾಮೀಜಿ, ಸಿದ್ದರಾಮಾನಂದಪುರಿ ಮಹಾಸ್ವಾಮೀಜಿ, ಶಿವಾನಂದಪುರಿ ಮಹಾಸ್ವಾಮೀಜಿ, ತ್ರಿದಂಡಿ ವೆಂಕಟರಾಮಾನುಜ ಮಹಾಸ್ವಾಮೀಜಿ, ಸಮಾಜದ ಮುಖಂಡರಾದ ಹೆಚ್. ವಿಶ್ವನಾಥ್, ಸಚಿವರಾದ ಭೈರತಿ ಸುರೇಶ್, ಶಾಸಕರಾದ ಎಸ್.ಟಿ ಸೋಮಶೇಖರ್, ಮಾಜಿ ಸಚಿವರಾದ ಹೆಚ್.ಎಂ ರೇವಣ್ಣ, ಕೆ.ಎಸ್ ಈಶ್ವರಪ್ಪ, ಬಂಡೆಪ್ಪ ಕಾಶಂಪುರ್, ಕೊಪ್ಪಳ ವಿವಿ ಕುಪಪತಿಗಳಾದ ಬಿ.ಕೆ ರವಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು./////