Belagavi News In Kannada | News Belgaum

ಕಲ್ಲು ಪುಡಿ ಮಾಡುವ ಯಂತ್ರ : ವಿವರಣೆ ಕೇಳಿದ ಸಾಬಣ್ಣ ತಳವಾರ

ಬೆಳಗಾವಿ 05: ಉತ್ತರ ಕರ್ನಾಟಕ ಭಾಗದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಕಲ್ಲು ಪುಡಿ ಮಾಡುವ (Stone Crusher Units) ಘಟಕಗಳು ಕರ್ನಾಟಕ ಸರ್ಕಾರದ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಕಾಯ್ದೆ 2011 ರ ಮಾರ್ಗಸೂಚಿಗಳನ್ನು
ಉಲ್ಲಂಘಿಸುತ್ತಿವೆ. ಅನಧಿಕೃತ ಘಟಕಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಸರಕಾರಕ್ಕೆ ಬರುವ ಆದಾಯವು ಸರಿಯಾ ಬರುತ್ತಿಲ್ಲ.
ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸರಿಯಾಗಿ ಪರೀಶೀಲಿಸಿ ಮೇಲ್ವಿಚಾರಣೆ ಮಾಡದೆ ಲೈಸೆನ್ಸ್‌ ನೀಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ತಿಂಗಳು ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸದೇ ಅನಧಿಕೃತ ಘಟಕಗಳು ತಲೆ ಎತ್ತುತ್ತಿವೆ. ಈ
ವಿಷಯವಾಗಿ ಬೆಳಗಾವಿಯಲ್ಲಿ ಕಲ್ಲು ಪುಡಿ ಮಾಡುವ (Stone Crusher Units) ಘಟಕಗಳು ಮಾರ್ಗಸೂಚಿ ಉಲ್ಲಂಘಿಸುತ್ತಿರುವ
ಬಗ್ಗೆ ಕೈಗೊಂಡ ಕ್ರಮಗಳ ಕುರಿತು ವಿಧಾನ ಮಂಡಲದ 150 ನೇ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ತಳವಾರ
ಸಾಬಣ್ಣ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರನ್ನು ಪ್ರಶ್ನಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನವರು ಉತ್ತರಿಸುತ್ತಾ ಕರ್ನಾಟಕ ಕಲ್ಲುಪುಡಿ
ಮಾಡುವ ಘಟಕಗಳ ನಿಯಂತ್ರಣ ಅಧಿನಿಯಮ 2011 ಹಾಗೂ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ನಿಯಮಗಳು
2012 ರಂತೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಂದ
ಕಲ್ಲು ಪುಡಿ ಮಾಡುವ (Stone Crusher Units) ಘಟಕಗಳ ತಪಾಸಣೆ ನಡೆಸಲಾಗುತ್ತದೆ. 2021-22 ರಲ್ಲಿ 220 ಸ್ಟೋನ್ ಕ್ರಷರ್
ಘಟಕಗಳಲ್ಲಿ 177 ಘಟಕಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ 43 ಘಟಕಗಳು ನಿಷ್ಕಿಯವಾಗಿವೆ. ಲೈಸೆನ್ಸ ಷರತ್ತು ಉಲ್ಲಂಘಿಸಿರುವ 142
ಪ್ರಕರಣಗಳಿಂದ ರೂ. 55,65,000/- ದಂಡ ವಿಧಿಸಲಾಗಿದೆ. 2022-23 ನೇ ಸಾಲಿನಲ್ಲಿ ಲೈಸನ್ಸ್‌ ಪಡೆದ 266 ಸ್ಟೋನ್ ಕ್ರಷರ್
ಘಟಕಗಳಲ್ಲಿ 239 ಘಟಕಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ 30 ಘಟಕಗಳು ನಿಷ್ಕ್ರಿಯವಾಗಿವೆ. ಲೈಸೆನ್ಸ್‌ ಷರತ್ತು ಉಲ್ಲಂಘಿಸಿರುವ
107 ಪ್ರಕರಣಗಳಿಂದ ರೂ.16,60,000/- ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.