Belagavi News In Kannada | News Belgaum

ರಾಜ್ಯದ ಅಂಗನವಾಡಿಗಳಿಗೆ ಫಿಲ್ಟರ್ ನೀರು, ಶೌಚಾಲಯ ವ್ಯವಸ್ಥೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

ಬೆಂಗಳೂರು: ರಾಜ್ಯದ ಅಂಗನವಾಡಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರಿಗೆ ಫಿಲ್ಟರ್ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಕರ್ನಾಟಕ ವಿಧಾನ ಸಭೆಯಲ್ಲಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಕೆ.ಎಂ. ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬರುವ ಬಜೆಟ್ ನಲ್ಲಿ ಈ ಯೋಜನೆ ಅಳವಡಿಸಿಕೊಳ್ಳಲು ಮುಖ್ಯಮಂತ್ರಿಗೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅನೇಕ ಅಂಗನವಾಡಿಗಳ ಕಟ್ಟಡಗಳ ನಿರ್ಮಾಣ ಕಾರ್ಯ ಅರ್ಧದಲ್ಲಿದ್ದು ಅವುಗಳನ್ನು ಪೂರ್ತಿಗೊಳಿಸಲು ಹಾಗೂ ಅಂಗನವಾಡಿ ಮಕ್ಕಳಿಗೂ ಶೌಚಾಲಯ ವ್ಯವಸ್ಥೆ ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂಬ ಶಾಸಕ ನಾರಾಯಣಸ್ವಾಮಿ ಅವರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳಕರ, ಆದಷ್ಟೂ ಶೀಘ್ರವೇ ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಇಲಾಖೆಗೆ ಈ ಕುರಿತು ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
 ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣವನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ಮಾಹಿತಿ ನೀಡಿದರು.