Belagavi News In Kannada | News Belgaum

ಚಿಕ್ಕೋಡಿಯಲ್ಲಿ ಜೈನ ಮುನಿ ನಾಪತ್ತೆ; ಭಕ್ತರಲ್ಲಿ ಆತಂಕ

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದಿಂದ ಜೈನ ಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದಾರೆ.

ಜು.6 ಬೆಳಗ್ಗೆ 8 ಗಂಟೆಯಿಂದ ನಾಪತ್ತೆಯಾಗಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ. ಜು.5ರಂದು ರಾತ್ರಿ 10 ಗಂಟೆಯವರೆಗೆ ಆಶ್ರಮದಲ್ಲಿರುವ ತಮ್ಮ ಕೋಣೆಯಲ್ಲಿಯೇ ಇದ್ದ ಜೈನಮುನಿ. ನಿನ್ನೆ ಬೆಳಗ್ಗೆ ಭಕ್ತರು ಆಶ್ರಮಕ್ಕೆ ಆಗಮಿಸಿದಾಗ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ಇನ್ನು ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ಜೈನಮುನಿಗಳು ವಾಸವಿದ್ದರು. ಇದೀಗ ಅವರು ವಾಸವಿರುವ ಕೋಣೆಯಲ್ಲಿಯೇ ಪಿಂಚಿ, ಕಮಂಡಲು ಹಾಗೂ ಮೊಬೈಲ್​ನ್ನು ಬಿಟ್ಟು ಹೋಗಿದ್ದಾರೆ. ಇನ್ನು ಜೈನ ಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲು ತಗೆದುಕೊಂಡು ಹೋಗುವ ಪ್ರತೀತಿಯಿತ್ತು. ಹೀಗಿರುವಾಗ ಈ ಎಲ್ಲಾ ವಸ್ತುಗಳು ಕೋಣೆಯಲ್ಲಿಯೇ ಇರುವ ಹಿನ್ನೆಲೆ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಜೊತೆಗೆ ಆಶ್ರಮಕ್ಕೆ ಸಂಬಂಧಿಸಿದ ಕೆಲವು ದಾಖಲೆ ಪತ್ರಗಳು ಸಹ ನಾಪತ್ತೆಯಾಗಿರುವ ಮಾಹಿತಿಯಿದೆ.

ಭಕ್ತರಿಂದ ಹುಡುಕಾಟ: ನಿನ್ನೆ ಜೈನ ಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗುತ್ತಿದ್ದಂತೆ. ಭಕ್ತರು ಇಡೀ ದಿನ ಜೈನ ಬಸದಿಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಸಿಗದ ಕಾರಣ, ಇಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಆಚಾರ್ಯ ಕಾಮಕುಮಾರನಂದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ನಾಪತ್ತೆ ದೂರು ದಾಖಲು ಮಾಡಿದ್ದಾರೆ./////