Belagavi News In Kannada | News Belgaum

ಬೌದ್ಧರು ಹಿಂದೂಗಳ ವಿರೋಧಿ ಅಲ್ಲ ಎಂದ ತೋಂಟದಾರ್ಯ ಮಠದ ಡಾ. ಸಿದ್ದರಾಮಶ್ರೀ

ಧಾರವಾಡ: ಜೈನರು, ಸಿಖ್ಖರು ಹಾಗೂ ಬೌದ್ಧರು ಹಿಂದೂಗಳ ವಿರೋಧಿ ಅಲ್ಲ. ಹಿಂದೂ ಎಂಬುದು ಧರ್ಮವೇ ಅಲ್ಲ, ಹಿಂದೂ ಜೀವನ ಪದ್ಧತಿಯಷ್ಟೇ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ದರಾಮಶ್ರೀ ಹೇಳಿದ್ದಾರೆ..

ನಗರದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಓರ್ವ ಸ್ಥಾಪಕ ಇದ್ದರೆ ಮಾತ್ರ ಅದೊಂದು ಧರ್ಮ ಆಗುತ್ತದೆ. ಲಿಂಗಾಯತ ಸ್ವತಂತ್ರ ಧರ್ಮ, ಬಸವಣ್ಣ ಅದರ ಸ್ಥಾಪಕರು. ವಚನ ಸಾಹಿತ್ಯವೇ ಲಿಂಗಾಯತ ಸ್ವತಂತ್ರ ಧರ್ಮದ ಸಂವಿಧಾನ ಎಂದು ಹೇಳಿದರು..

ಹಿಂದೂ ಧರ್ಮದಲ್ಲಿ ಯಾವುದೇ ನಿರ್ದಿಷ್ಟವಾದ ಗ್ರಂಥ ಇಲ್ಲ. ಹಿಂದೂ ಧರ್ಮದಲ್ಲಿ ಓರ್ವ ಪ್ರವರ್ತಕ, ಪ್ರವಾದಿ ಇಲ್ಲ. ಹಿಂದೂಗಳು 33 ಕೋಟಿ ದೇವರನ್ನೂ ಪೂಜೆ ಮಾಡುತ್ತಾರೆ. ಭಗವದ್ಗೀತೆಯ ಯಾವ ಶ್ಲೋಕದಲ್ಲಿಯೂ ಹಿಂದೂ ಪದ ಇಲ್ಲ. ನಾವು ಸ್ವತಂತ್ರ ಧರ್ಮ ಪಡೆದರೆ ಹಿಂದೂ ವಿರೋಧಿ ಆಗುವುದಿಲ್ಲ ಎಂದು ತಿಳಿಸಿದರು..

ವೀರಶೈವ ಬೇರೆ ಲಿಂಗಾಯತವೇ ಬೇರೆ ಎಂದ ಸಿದ್ದರಾಮ ಸ್ವಾಮೀಜಿ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ವಿಚಾರವಾಗಿ ಮಾತನಾಡಿದ ಅವರು, ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ ಸಿಗಬೇಕು. ಈ ಸಂಬಂಧ ಕೇಂದ್ರಕ್ಕೆ ಮತ್ತೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕು. ಲಿಂಗಾಯತ ಧರ್ಮದ ಒಳಪಂಗಡಗಳ ಬಗ್ಗೆ ಅಧ್ಯಯನ ನಡೆಯಬೇಕು ಎಂದರು..

ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಹೋರಾಟ ಮಾಡುತ್ತಿದ್ದೇವೆ. ವೀರಶೈವ ಲಿಂಗಾಯತ ಯಾವ ದಾಖಲೆಯಲ್ಲೂ ಇಲ್ಲ. ವೀರಶೈವ ಬೇರೆ ಲಿಂಗಾಯತವೇ ಬೇರೆ. ಎರಡನ್ನೂ ಸೇರಿಸಿ ಒಬಿಸಿ ಪಟ್ಟಿಗೆ ಸೇರಿಸಿ ಎಂದು ಅನ್ನೋದು ಸರಿಯಲ್ಲ. ರಾಜ್ಯ ಸರ್ಕಾರ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು..

2016ರಲ್ಲಿ ಸ್ವತಂತ್ರ ಧರ್ಮ ಮಾನ್ಯತೆಗೆ ಹೋರಾಟ ಮಾಡಿದ್ದೆವು. ಸದ್ಯ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮುಂದುವರಿಸುತ್ತೇವೆ. ಈ ಹಿಂದೆ ಹೋರಾಟ ಮಾಡಿದಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ನ್ಯಾ.ನಾಗಮೋಹನ ದಾಸ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದ್ದರು. ಬಳಿಕ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಕೇಂದ್ರ ಸರ್ಕಾರ ಆ ಪ್ರಸ್ತಾವನೆ ಪರಿಶೀಲಿಸದೆ ವಾಪಸ್ ಕಳುಹಿಸಿದೆ. ಈಗ ಮತ್ತೊಮ್ಮೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು..