Belagavi News In Kannada | News Belgaum

ಐಷಾರಾಮಿ ಜೀವನಕ್ಕೆ ಹೆಣ್ಣಿನ ವೇಷ ಹಾಕುತ್ತಿದ್ದ ಐನಾತಿ ಅರೆಸ್ಟ್..

ಬೆಂಗಳೂರು: ಹೆಂಡತಿ-ಮಕ್ಕಳಿದ್ದರೂ, ಐಷಾರಾಮಿ ಜೀವನಕ್ಕಾಗಿ ಹೆಣ್ಣಿನ ವೇಷ ಹಾಕಿ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾದ ಪ್ರಕರಣ ಬಾಗಲಗುಂಟೆಯಲ್ಲಿ ನಡೆದಿದೆ..

ಬಂಧನಕ್ಕೊಳಗಾದ ವ್ಯಕ್ತಿಯನ್ನು ಚೇತನ್ ಎಂದು ಗುರುತಿಸಲಾಗಿದೆ. ಬೀದಿಯಲ್ಲಿ ಮಂಗಳಮುಖಿಯಂತೆ ನಟಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ. ಜನ ಹಣ ಕೊಡದಿದ್ದಾಗ ಹೆದರಿಸಿ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ.

 ಅಲ್ಲದೇ ಮಂಗಳಮುಖಿಯರ ಸಹವಾಸ ಮಾಡಿದ್ದ ಆರೋಪಿ ಅವರೊಂದಿಗೆ ಭಿಕ್ಷಾಟನೆಗೆ ತೆರಳುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ.

ಮನೆಯಲ್ಲಿ ಪತ್ನಿ ಹಾಗೂ ಇತರರಿಗೆ ತಿಳಿಯದಂತೆ ಪ್ರತ್ಯೇಕ ರೂಮ್ ಸಹ ಮಾಡಿದ್ದ. ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತಾ ಭಿಕ್ಷಾಟನೆ ಮಾಡುತ್ತಿದ್ದ. ಮೆಟ್ರೋದ ಬಿಎಂಆರ್‌ಸಿಎಲ್ ಜಾಗದಲ್ಲಿ ಶೆಡ್ ನಿರ್ಮಿಸಲು ಮುಂದಾಗಿದ್ದ. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರು ಪರಿಶೀಲನೆಗೆ ತೆರಳಿದ್ದಾಗ ಸ್ಥಳೀಯ ಮಹಿಳೆಯರ ಸೀರೆ ಎಳೆದಾಡಿ ವಿಕೃತಿ ಮೆರೆದಿದ್ದ.‌

ಈ ವೇಳೆ ಚೇತನ್‍ನನ್ನು ಹಿಡಿದು ಸ್ಥಳೀಯರು ಥಳಿಸಲು ಮುಂದಾಗಿದ್ದಾರೆ. ಆಗ ಆತನ ಅಸಲಿ ಕತೆ ಬಯಲಾಗಿದೆ. ಬಾಗಲಗುಂಟೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.