ಮಣಿಪುರದಲ್ಲಿ ಗುಂಡಿನ ಸುರಿಮಳೆ; ದಾಳಿಕೋರರ ಗುಂಡಿಗೆ ಬಲಿಯಾದ ಮಹಿಳೆ..

ಇಂಫಾಲ: ಮಣಿಪುರದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ಪೂರ್ವ ಇಂಫಾಲ್ನಲ್ಲಿ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜಿಲ್ಲೆಯ ಸಾವೊಂಬಂಗ್ ಪ್ರದೇಶದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..
ದುಷ್ಕರ್ಮಿಗಳು 50 ವರ್ಷ ವಯಸ್ಸಿನ ಮಾರಿಂಗ್ ಎಂಬ ಮಹಿಳೆಯ ಮನೆಗೆ ನುಗ್ಗಿ ಅವರ ಮುಖದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದಾಳಿಕೋರರು ಮಹಿಳೆಯ ಮೇಲೆ ಗುಂಡು ಹಾರಿಸಿದ್ದರ ಜತೆಗೆ, ಘಟನಾ ಸ್ಥಳದಿಂದ ಪಲಾಯನ ಮಾಡುವ ಮೊದಲು ಆಕೆಯ ಮುಖವನ್ನು ವಿರೂಪಗೊಳಿಸಿದ್ದಾರೆ ಎನ್ನಲಾಗಿದೆ. .
ಮಣಿಪುರ ಪೊಲೀಸರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಗುಂಡಿನ ದಾಳಿ ನಡೆದ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಸಮೀಪದ ಪ್ರದೇಶಗಳಲ್ಲಿನ ಮನೆಗಳಲ್ಲೂ ಶೋಧ ನಡೆಸಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರು ಈಗಾಗಲೇ ಸುತ್ತಮುತ್ತಲಿನ ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ..
ಹಿಂಸಾಚಾರದಿಂದಾಗಿ ಸುದೀರ್ಘ ಅವಧಿಗೆ ಮುಚ್ಚಲ್ಪಟ್ಟಿದ್ದ ಶಿಕ್ಷಣ ಸಂಸ್ಥೆಗಳು ಶುಕ್ರವಾರವಷ್ಟೇ ಮರಳಿ ಕಾರ್ಯಾರಂಭ ಮಾಡಿದ್ದವು. ಇದಾದ ನಂತರ ಒಂದು ದಿನದ ಅವಧಿಯಲ್ಲಿ ಪಶ್ಚಿಮ ಇಂಫಾಲ್ ಜಿಲ್ಲೆಯ ಶಾಲೆಯೊಂದರ ಹೊರಗೆ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ..