Belagavi News In Kannada | News Belgaum

ವಿಚ್ಛೇದನಕ್ಕೆ ಒಪ್ಪದ ಪತ್ನಿಯ ಕೊಲೆಗೆ ಸ್ಕೆಚ್; ಪತಿ ಅರೆಸ್ಟ್‌..

ಬೆಂಗಳೂರು: ವಿಚ್ಛೇದನ ಕೊಡಲು ಒಪ್ಪದ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿ ಅಪಘಾತ ಎಂದು ಬಿಂಬಿಸಲು ಹೋಗಿ ಪತಿ ಸಿಕ್ಕಿಬಿದ್ದ ಪ್ರಕರಣ ಬಾಗಲೂರಿನಲ್ಲಿ ನಡೆದಿದೆ..

 

ಕಳೆದ ಒಂದೂವರೆ ವರ್ಷದ ಹಿಂದೆ ಅರವಿಂದ್ ಹಾಗೂ ಚೈತನ್ಯ ವಿವಾಹವಾಗಿದ್ದರು. ಪತ್ನಿ ಅತ್ತೆ ಮಾವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದಳು. ಇದರಿಂದ ಪತಿ, ತಂದೆ-ತಾಯಿಯಿಂದ ದೂರ ಮಾಡಿದ್ದಕ್ಕೆ ಅಸಮಾಧಾನ ಮಾಡಿಕೊಂಡಿದ್ದ. ಅಲ್ಲದೇ ವಿಚ್ಛೇದನ ಕೊಡುವಂತೆ ಪೀಡಿಸುತ್ತಿದ್ದ. ಆದರೆ ವಿಚ್ಛೇದನ ನೀಡಲು ಪತ್ನಿ ತಯಾರಿರಲಿಲ್ಲ..

 

ಇದರಿಂದ ಪತ್ನಿಯನ್ನು ಕೊಲೆ ಮಾಡಲು ಅರವಿಂದ್ ನಿರ್ಧರಿಸಿದ್ದ. ಅದಕ್ಕಾಗಿ ಹಳೆಯದೊಂದು ಟಾಟಾ ಸುಮೊ ಕಾರು ಖರೀದಿಸಿದ್ದ. ಅಲ್ಲದೇ ಅದಕ್ಕೆ ಒಬ್ಬ ಚಾಲಕನನ್ನ ನೇಮಿಸಿಕೊಂಡಿದ್ದ. ಅಲ್ಲದೇ ಆತನಿಗೆ ಪತ್ನಿಯನ್ನು ಅಪಘಾತವೆಸಗಿ ಕೊಲ್ಲುವಂತೆ ಸೂಚಿಸಿದ್ದ. ಇದಕ್ಕೆ ಚಾಲಕ ಉದಯ್ ಕುಮಾರ್ ಒಪ್ಪಿದ್ದ. ಅಪಘಾತ ಎಸಗಲು ಆಕೆ ಓಡಾಡುವ ಸ್ಥಳಗಳನ್ನು ಗುರುತಿಸಿ ಸಿಸಿ ಕ್ಯಾಮೆರಾ ಇರದ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದ..

 

ಬಳಿಕ ದಿನ ನಿಗದಿ ಮಾಡಿಕೊಂಡು ಬಾಗಲೂರಿನ ಕೆಐಡಿಬಿ ಲೇಔಟ್‍ನಲ್ಲಿ ಭರತನಾಟ್ಯ ತರಗತಿ ಮುಗಿಸಿ ಬೈಕ್‍ನಲ್ಲಿ ಬರುತ್ತಿದ್ದ ಚೈತನ್ಯಳಿಗೆ ಕಾರನ್ನು ಗುದ್ದಿಸಲಾಗಿತ್ತು. ಈ ವೇಳೆ ಕಾರಿನಲ್ಲಿ ಪತಿ ಅರವಿಂದ್ ಕೂಡ ಇದ್ದ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದರು. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು..

 

ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದ ದೇವನಹಳ್ಳಿ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆರಂಭಿಸಿದ್ದರು. ಬಳಿಕ ಪ್ರಕರಣದಲ್ಲಿ ಅನುಮಾನ ವ್ಯಕ್ತವಾಗಿದ್ದು ಬಾಗಲೂರು ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಿದ್ದರು. ಈ ವೇಳೆ ಕಾರನ್ನು ಗ್ಯಾರೆಜ್‍ನಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು ಕಾರಿನ ಹಿಂದಿನ ಮಾಲೀಕನನ್ನು ವಿಚಾರಿಸಿದ್ದಾರೆ. ಈ ವೇಳೆ ಕಾರನ್ನು ಮಾರಾಟ ಮಾಡಿದ್ದಾಗಿ ಆತ ತಿಳಿಸಿದ್ದಾನೆ..

 

ಬಳಿಕ ಚಾಲಕ ಉದಯ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಆತನ ಮನೆಯಲ್ಲೂ ಕೌಟುಂಬಿಕ ಕಲಹದಿಂದ ಪತಿ-ಪತ್ನಿ ನಡುವೆ ವಿಚ್ಛೇದನ ಮಾತುಕತೆ ನಡೆಯುತ್ತಿತ್ತು. ಇದೇ ಕಾರಾಣಕ್ಕೆ ಎಲ್ಲಾ ಪತ್ನಿಯರೂ ಹೀಗೆ ಎಂದು ಆತ ಈ ಕೊಲೆಗೆ ಒಪ್ಪಿದ್ದ ಎಂದು ತಿಳಿದು ಬಂದಿದೆ. ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದ ಆರು ತಿಂಗಳ ಬಳಿಕ ಪ್ರಕರಣದ ಸತ್ಯ ಹೊರಬಂದಿದೆ..