ಬಿಜೆಪಿಯಲ್ಲಿ ನಿರುತ್ಸಾಹ, ಕಾಂಗ್ರೆಸ್‌ನತ್ತ ಕಾರ್ಯಕರ್ತರ ಚಿತ್ತ

ರಾಯಚೂರು: ಜಿಲ್ಲಾ ಬಿಜೆಪಿ ಘಟಕದಲ್ಲಿ ಆಂತರಿಕ ಕಚ್ಚಾಟ, ಒಳಬೇಗುದಿ, ಒಳ ಒಪ್ಪಂದಗಳು, ಆರೋಪ, ಪ್ರತ್ಯಾರೋಪಗಳು, ನಾಯಕರ ಕೆಸರೆರಚಾಟದಿಂದಾಗಿ ಕಾರ್ಯಕರ್ತರು ಕಾಂಗ್ರೆಸ್‌ಗೆ ವಲಸೆ ಹೋಗುವತ್ತ ಚಿತ್ತಹರಿಸಿದ್ದಾರೆ. ಪಕ್ಷದ ಎಲ್ಲ ಘಟಕಗಳಲ್ಲೂ ಅಸಮಾಧಾನದ ಹೊಗೆ ಹೆಚ್ಚಿದ್ದು ತಣಿಸುವುದು ಪಕ್ಷದ ವರಿಷ್ಠರಿಗೆ ತಲೆ ನೋವಾಗಿದೆ…….
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಹಿನ್ನಡೆಯಾಗಿದೆ. ಎಲ್ಲ ಪಕ್ಷಗಳಲ್ಲಿ ಬಲವರ್ಧನೆಗೆ ಆದ್ಯತೆ ನೀಡಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ನಡೆದಿದೆ. ಆದರೆ ರಾಷ್ಟ್ರೀಯ ಪಕ್ಷ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಅಸಮಾಧಾನದ ಹೊಗೆ ಹೆಚ್ಚುತ್ತಲೇ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದರಿಂದ ಕಾರ್ಯಕರ್ತರು ಪಕ್ಷ ತೊರೆಯುವ ಮುನ್ನೂಚನೆ ಇದೆ..
ಇದೀಗ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಇದೇ ಸ್ಥಿತಿ ಇದೆ. ವಿಧಾನಸಭೆ ಚುನಾವಣೆಯಲ್ಲಿ ಸೋತ ಹಾಗೂ ಗೆದ್ದ ಯಾವ ನಾಯಕರು ಕಾರ್ಯಕರ್ತರ ಕೈಗೆ ಸಿಗದೆ ಇದ್ದರಿಂದಲೂ ಅನಾಥರಾಗಿದ್ದಾರೆ. ಸಮಾಧಾನ ಹೇಳಬೇಕಾದ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕಾದ ನಾಯಕರೇ ಕಾರ್ಯಕರ್ತರ ಬಳಿ ಸುಳಿಯುತ್ತಿಲ್ಲ ಎಂಬ ಆರೋಪಗಳಿವೆ..
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿದ್ದು ಗ್ರಾಮೀಣ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಹೊರತು ಪಡಿಸಿದರೆ ಬೇರೆ ಯಾವ ಅಭ್ಯರ್ಥಿಗಳು ಕಾರ್ಯಕರ್ತರ ಕೈಗೆ ಸಿಗದೆ ಬೆಂಗಳೂರಿನಲ್ಲಿ ಬಿಡಾರ ಹೂಡಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟಿಸುವವರಿಲ್ಲದೇ ಸಾಮಾನ್ಯ ಕಾರ್ಯಕರ್ತರ ಸ್ಥಿತಿ ಕೇಳದಂತಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್‌ನತ್ತ ಮುಖ ಮಾಡಿದ್ದು, ಈ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪಕ್ಷ ಬೆಲೆತೆರುವುದರಲ್ಲಿ ಅನುಮಾನವೇ ಇಲ್ಲ ಎಂಬ ಅಭಿಪ್ರಾಯಗಳಿವೆ..
ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್ ಅವರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಬೇಕು. ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಪಕ್ಷದ ಅಭ್ಯರ್ಥಿಗಳು ಎಲ್ಲೆಲ್ಲಿ ಸೋತಿದ್ದಾರೋ ಅಂತಹ ಕಡೆ ಹೋಗಿ ಹುರಿದುಂಬಿಸುವ ಬದಲು ನಿರಾಸಕ್ತಿ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣಗಳೇನು? ಯಾವ್ಯಾವ ಕ್ಷೇತ್ರದಲ್ಲಿ ಯಾವ್ಯಾವ ಬೂತ್‌ನಲ್ಲಿ ಕಡಿಮೆ ಮತಗಳು ಬಿದ್ದಿವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಕೆಲಸಗಳು ಆಗಬೇಕು. ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರು ಆಲೋಚಿಸುತ್ತಿಲ್ಲ ಎಂಬ ಆರೋಪಗಳು ಕಾರ್ಯಕರ್ತರ ವಲಯದಲ್ಲಿವೆ..