ಎಂಎಸ್ಎಂಇ ವಲಯಕ್ಕೆ ಫಿನ್ ಟೆಕ್ ಕಂಪನಿಗಳ ಜೊತೆ ಸಂಪರ್ಕ ಬೆಸೆಯಲು ವೇದಿಕೆ ರಚನೆ: ಸಚಿವ ಎಂ.ಬಿ ಪಾಟೀಲ

ಬೆಂಗಳೂರು: ಎಂ ಎಸ್ ಎಂ ಇ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) ವಲಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅವುಗಳಿಗೆ ಫಿನ್ ಟೆಕ್ ಕಂಪನಿಗಳ ಜೊತೆ ಸಂಪರ್ಕ ಕಲ್ಪಿಸಲು ವೇದಿಕೆಯೊಂದನ್ನು ರಚಿಸುವುದಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಭಾನುವಾರ ಹೇಳಿದ್ದಾರೆ.
ಎಂಎಸ್ಎಂಇ ಗಳು ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟಿವೆ. ಜೊತೆಗೆ, ಇವು ಇಲ್ಲಿನ ಆರ್ಥಿಕತೆಯ ಬೆನ್ನೆಲುಬಾಗಿವೆ. ಹೀಗಾಗಿ, ಈ ವಲಯದ ಉದ್ದಿಮೆಗಳಿಗೆ
ಹಣಕಾಸು ಲಭ್ಯತೆ ಸುಲಭಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಟ್ವೀಟ್ ಮೂಲಕ ವಿವರಿಸಿದ್ದಾರೆ.
ಕರ್ನಾಟಕ ರಾಜ್ಯವು ಫಿನ್ ಟೆಕ್ ವಲಯವಾಗಿಯೂ ರೂಪುಗೊಂಡಿದೆ. ಇದರ ಸದುಪಯೋಗ ಪಡೆಯುವ ಸಲುವಾಗಿ ಎಂಎಸ್ಎಂಇ ವಲಯಕ್ಕೆ ಫಿನ್ ಟೆಕ್ ಕಂಪನಿಗಳ ಜೊತೆ ಸಂಪರ್ಕ ಏರ್ಪಡುವಂತೆ ಮಾಡಿದರೆ ಅದರಿಂದ ಮುಖ್ಯವಾಗಿ ತಯಾರಿಕಾ ವಲಯದ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.