Belagavi News In Kannada | News Belgaum

ಬೆಳಗಾವಿ: ತನ್ನ ಮಗನನ್ನೇ ಕೈಯಾರೆ ಕೊಂದ ಪಾಪಿ ತಂದೆ

ಬೆಳಗಾವಿ: ಎರಡನೇ ಮಗನ ಮದುವೆಗೆ ಅಡ್ಡಿಯಾಗ್ತಾನೆಂದು ತಂದೆಯೇ ತನ್ನ ಮೊದಲ ಮಗನನ್ನು ಕೈಯಾರೆ ಕೊಂದ ಘಟನೆ ಹುಕ್ಕೇರಿ ತಾಲೂಕಿನ ಬೋರಗಲ್​ನಲ್ಲಿ ನಡೆದಿದೆ.

ನಿಖಿಲ್ ರಾಜಕುಮಾರ್ ಮಗದುಮ್ (24) ಕೊಲೆಯಾದ ದುರ್ದೈವಿ. ತಂದೆ ರಾಜಕುಮಾರ್ ಮಗದುಮ್ ಕೊಲೆ ಮಾಡಿದ ಕಿರಾತಕ.
ರಾಜಕುಮಾರ್ ಮಗದುಮ್ ಅವರ ಮೊದಲ ಮಗ ನಿಖಿಲ್ ರಾಜಕುಮಾರ್ ಮಗದುಮ್ ಮಾನಸಿಕ ಅಸ್ವಸ್ಥನಾಗಿದ್ದು, ಈತನಿಂದ 2ನೇ ಮಗನ ವಿವಾಹಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ.
ವಿಷ ಉಣಿಸಿ ಕೊಂದ ಪಾಪಿ ತಂದೆ: ನಿಖಿಲ್ ರಾಜಕುಮಾರ್ ಮಗದುಮ್​ನನ್ನು ತಂದೆ ರಾಜಕುಮಾರ್ ಮಗದುಮ್​ಗೆ ಮೊದಲಿಗೆ ವಿಷ ಉಣಿಸಿ ಬಳಿಕ ಮರಕ್ಕೆ ಬಲವಾಗಿ ತಲೆ ಹಾಯಿಸಿ ಕೊಂದಿದ್ದಾನೆ. ತಂದೆಯ ಕ್ರೌರ್ಯಕ್ಕೆ 24 ವರ್ಷದ ಮಾನಸಿಕ ಅಸ್ವಸ್ಥ ಮಗ ಸಾವನ್ನಪ್ಪಿದ್ದನು.
ಕೊಂದು ಕಥೆ ಕಟ್ಟಿದ: ಮಾನಸಿಕ ಅಸ್ವಸ್ಥ ಮಗ ಇದ್ದಾಗ ಚೆನ್ನಾಗಿರುವ ಮಗನಿಗೆ ಹೆಣ್ಣು ಸಿಗಲ್ಲ ಎಂದು ಭಾವಿಸಿ ತಂದೆ ರಾಜಕುಮಾರ್ ಮೊದಲ ಮಗನನ್ನು ಕೊಲ್ಲಲು ಪ್ಲಾನ್​ ಮಾಡುತ್ತಾನೆ. ಅದರಂತೆಯೇ ಮನೆಯಿಂದ ಆತನನ್ನು ಕರೆದುಕೊಂಡು ಹೋಗುತ್ತಾನೆ. ಬಳಿಕ ಕೊಲೆ ಮಾಡಿ ಬಂದು ಮನೆಯಲ್ಲಿ ನಿಖಿಲ್ ಬೆಳಗಾವಿ ಬಸ್ ನಿಲ್ದಾಣದಲ್ಲಿ ಕಾಣೆಯಾದ ಎಂದು ಕಥೆ ಕಟ್ಟಿದ್ದಾನೆ.
ಕಳೆದ ಮೇ 31 ರಂದು ಖಾನಾಪುರ ಹೊರವಲಯದಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಈ ಶವದ ಕುರಿತಾಗಿ ತನಿಖೆ ಶುರು ಮಾಡಿದ ಪೊಲೀಸರಿಗೆ ಅದು ನಿಖಿಲ್ ರಾಜಕುಮಾರ್ ಶವ ಎಂಬುದು ಗೊತ್ತಾಯಿತು. ನಿಖಿಲ್ ಕುರಿತು ಮಾಹಿತಿ ಸಂಗ್ರಹಿಸಿ ಪೊಲೀಸರು ಆತನ ಚಿಕ್ಕಪ್ಪ ಸಂತೋಷ್ ಮಗದುಮ್​ನನ್ನು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಸಂತೋಷ್ ಮಗದುಮ್ ಅಣ್ಣನೇ ನಿಖಿಲ್​​ನನ್ನು ಕೊಲೆ ಮಾಡಿದ್ದಾಗಿ ಹೇಳುವುದರ ಜೊತೆಗೆ ದೂರು ನೀಡಿದ್ದಾನೆ. ದೂರಿನ ಅನ್ವಯ ರಾಜಕುಮಾರ್ ಮಗದುಮ್​ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ರಾಜಕುಮಾರ್ ನಡೆದ ವಿಷಯ ಬಾಯ್ಬಿಟ್ಟಿದ್ದಾನೆ. ಕೊಲೆ‌ ಮಾಡಿದ್ದು ನಾನೆ ಎಂದು ಒಪ್ಪಿಕೊಂಡಿಕೊಂಡಿದ್ದಾನೆ. ಬಳಿಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////