ಹೂವಿನಂತೆ ಕಂಪು ಹರಡಿ ದೇವರಮುಡಿಗೆ ಅರ್ಪಿತವಾದ ಗಂಗಾಧರ ಮಡಿವಾಳೇಶ್ವರರು-ಡಾ. ಗುರುದೇವಿ ಹುಲೆಪ್ಪನವರ ಮಠ

ಬೆಳಗಾವಿ; ಕಂಪು ಹರಡಿ ದೇವರಮುಡಿಗೆ ಅರ್ಪಿತವಾದ ಹೂವಿನಂತೆ ಬಾಳಿ ಬದುಕಿದ ಗಂಗಾಧರ
ಮಡಿವಾಳೇಶ್ವರರು ತುರುಮುರಿ ಅವರನ್ನು ನೆನಪಿಸಿಕೊಳ್ಳುತ್ತಿರುವುದು ಅತ್ಯಂತ ಪ್ರಸ್ತುತ
ಎಂದು ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರ ಮಠ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಂಸ್ಕೃತಿಕ ಭವನದ
ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ನೆಹರು ನಗರದಲ್ಲಿರುವ ಕನ್ನಡ
ಭವನ ದಲ್ಲಿಂದು ಶತಮಾನ ಕಂಡ ಸಾಹಿತಿಗಳು ಕುರಿತು ಮಡಿವಾಳೇಶ್ವರ ತುರಮುರಿ ಅವರ ಬದುಕು
ಬರಹ ಕುರಿತು ಪ್ರಥಮ ತಿಂಗಳ ಕಾರ್ಯಕ್ರಮವನ್ನು. ಉದ್ಘಾಟಿಸಿ ಮಾತನಾಡುತ್ತಿದ್ದರು.
ತುರಮುರಿಯ ಗಂಗಾಧರ ಮಡಿವಾಳೇಶ್ವರರು ತಮ್ಮ 50ವರ್ಷದ ಜೀವಿತಾವಧಿಯಲ್ಲಿ ನಾಡ ನುಡಿಗೆ
ಸಲ್ಲಿಸಿದ ಸೇವೆ ಕನ್ನಡಿಗರು ಎಂದಿಗೂ ಮರೆಯಲಾಗದಂತದ್ದು , ಉಂಡುಟ್ಟು
ಕಳೆಯಲಾರದಂತದ್ದನ್ನು ಬಿಟ್ಟು ಹೋಗುವುದೇ ನಿಜವಾದ ಸಾಧನೆ ಅದೇ ರೀತಿ ಕನ್ನಡಕ್ಕಾಗಿ
ಕನ್ನಡ ಭಾಷೆಗಾಗಿ ಕನ್ನಡ ಸಂಸ್ಕೃತಿ ಗಾಗಿ ಬಹಳಷ್ಟುನ್ನು ತಮ್ಮ ಜೀವಿತಾವಧಿಯಲ್ಲಿ
ಮಾಡಿ ಹೋದವರು, ಕೀರ್ತಿ ಶೇಷರಾದರು, ಇಂತಹ ಸಾಧಕರ ಸಾಧನೆಯನ್ನು
ನೆನಪಿಸಿಕೊಳ್ಳುವುದರಿಂದ ನಮಗೆ ಲಾಭ, ನಾಡ ನುಡಿಯ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದ
ಅವರ ಶಬ್ದ ಮಂಜರಿ ಎನ್ನುವ ಶಬ್ದಕೋಶ ಕನ್ನಡದ ದೊಡ್ಡ ಆಸ್ತಿ ಎಂದರು.
ನಾಡ ನುಡಿಯ ಬಗ್ಗೆ ಅಭಿಮಾನ ಬೆಳೆಯಬೇಕಿರುವದು ಈ ಕ್ಷಣದ ತುರ್ತು ಅಗತ್ಯ ಸಾಮ್ರಾಜ್ಯಗಳ
ನಿರ್ಮಾಣವಾಗಿದ್ದೇ ಅಭಿಮಾನದಿಂದ ಅದನ್ನು ನಾವು ಮರೆಯಲಾಗದು, ದಾನ ಮತ್ತು ದಾಸೋಹ
ಸಂಸ್ಕೃತಿಗೆ ಹೆಸರಾದದ್ದು ನಮ್ಮ ನಾಡು ಪರರ ಸಂಸ್ಕೃತಿಯನ್ನು ನಮ್ಮಲ್ಲಿ
ಅಳವಡಿಸಿಕೊಂಡಿದೆಂದರೆ ಅದು ಕನ್ನಡ ನಾಡು, ಎಷ್ಟು ವರ್ಷ ಬದುಕಿದ್ದರೇನು
ಇನ್ನೊಬ್ಬರಿಗೆ ಉಪಕಾರ ವಾಗುವಂತೆ ಬದುಕುವುದು ಮುಖ್ಯ , ಇಂತಹ ಸಾಧಕರನ್ನು
ನೆನಪಿಸಿಕೊಳ್ಳುವ ಕಾರ್ಯ ಶ್ಲಾಘನೀಯ ಎಂದು ಡಾ. ಗುರುದೇವಿ ಹುಲೆಪ್ಪನವರ ಮಠ ಹೇಳಿದರು.
ಮುಖ್ಯ ಅತಿಥಿಗಳಾಗಿ ಗಡಿ ಕನ್ನಡಿಗ ದಿನಪತ್ರಿಕೆಯ ಸಂಪಾದಕ ಮುರುಗೇಶ್ ಶಿವಪೂಜಿ
ಮಾತನಾಡಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಜನರಿಗೆ ನೈತಿಕ ಶಿಕ್ಷಣ, ನಮ್ಮ
ಭಾಷೆ ನಡುವಳಿಕೆಗಳು ಸಂಸ್ಕೃತಿ ಮೌಲ್ಯಗಳ ತಿಳುವಳಿಕೆ ಕೊಡುವಂಥ ಕಾರ್ಯವಾಗಲಿ,
ತನ್ಮೂಲಕ ಅವರು ಕಸಾಪ
ಕಡೆಗೆ ಆಕರ್ಷಿತರಾಗುವಂತೆ ಆಗಬೇಕು ಎಂದರಲ್ಲದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ
ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ
ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ.ಮಂಗಲಾ ಮೆಟ ಗುಡ್ಡ ಅವರು ಮಾತನಾಡಿ
ನಿರ್ಮಾಣ ಹಂತದಲ್ಲಿರುವ ಕನ್ನಡ ಭವನದ ಕಟ್ಟಡಗಳಿಗೆ ದುಡ್ಡಿನ ತೊಂದರೆ ಆಗದಂತೆ ಸರಕಾರ
ಕಾಳಜಿ ವಹಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು, ಈವರೆಗೆ ನಡೆದ 13
ಸಮ್ಮೇಳನಗಳು 12 ಕಾರ್ಯಕ್ರಮಗಳು ಇವೆ ಇನ್ನಿತರ ಚಟುವಟಿಕೆಗಳ ಕುರಿತು ಸಭೆಗೆ ವಿವರಿಸಿ
ಮುಂದಿನ ದಿನಗಳಲ್ಲಿ ಯುವಕರಿಗಾಗಿ ಮಕ್ಕಳಿಗಾಗಿ ಹತ್ತು ಹಲವು ಕಾರ್ಯಕ್ರಮಗಳಲ್ಲದೆ
ದತ್ತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲಾಗುವುದು ಇದರೊಂದಿಗೆ ಹಲವು
ಸ್ಪರ್ಧಾತ್ಮಕ ಯೋಜನೆಗಳನ್ನು ಹಾಕಿಕೊಳ್ಳುವುದಾಗಿ ಹೇಳಿದರು. ಬೈಲಹೊಂಗಲದ ಹಿರಿಯ
ಸಾಹಿತಿ ಶ್ರೀಮತಿ.ಗೌರದೇವಿ ತಾಳಿಕೋಟಿಮಠ ಅವರು ತುರಮುರಿಯ ಗಂಗಾಧರ ಮಡಿವಾಳೇಶ್ವರ
ಅವರ ಬದುಕು ಮತ್ತು ಬರಹ ಕುರಿತು ವಿಶೇಷ ಉಪನ್ಯಾಸ ನೀಡಿ ಗಂಗಾಧರ ಮಡಿವಾಳೇಶ್ವರ
ಚುರುಮುರಿಯವರು ಓರ್ವ ಲೇಖಕನಾಗಿ ಸಾಹಿತಿಯಾಗಿ ಸಂಶೋಧಕನಾಗಿ ನಿಘಂಟು ರಚನಕಾರರಾಗಿ
ಹಳೆಗನ್ನಡ ಕಾವ್ಯಗಳ ಅಧ್ಯಯನಕಾರರಾಗಿ, ಛಂದಸ್ಸು ಶಾಸ್ತ್ರದ ಅಧ್ಯಯನಕಾರರಾಗಿ ಒಬ್ಬ
ಶ್ರೇಷ್ಠ ವ್ಯಕ್ತಿಯಾಗಿದ್ದರು, ಕನ್ನಡ ನುಡಿಯನ್ನು ಮತ್ತು ಕನ್ನಡ ನಾಡನ್ನು ಶ್ರೀಮಂತ
ಗೊಳಿಸಿದ ಅವರ ಕನ್ನಡದ ಸೇವೆಯನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಾಗಲಾರದು
ಎಂದರು.
ಹಳೆಗನ್ನಡದ 16,000 ಕಾವ್ಯಗಳನ್ನು ಹೊಸಗನ್ನಡಕ್ಕೆ ಅನುವಾದಿಸಿ ಅಂದಿನ ಕಾಲದಲ್ಲಿ 600
ಪುಟಗಳ ಬೃಹತ್ ಗ್ರಂಥ ರಚನೆ, ಬಾಣಭಟ್ಟನ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ
ಗಂಗಾಧರ ಮಡಿವಾಳೇಶ್ವರ ತುರುಮುರಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಓರ್ವ
ಪತ್ರಕರ್ತರಾಗಿ ” ಮಠ ” ಎಂಬ ಪತ್ರಿಕೆಯನ್ನು ಹಲವು ವರ್ಷಗಳ ಕಾಲ ನಡೆಸಿದವರು, ಅದು
ಇಂದಿಗೂ “ಜೀವನ ಶಿಕ್ಷಣ” ಎಂಬ ಹೆಸರಿನಲ್ಲಿ ಪ್ರಕಟಣೆ ಆಗುತ್ತಿದೆ ಅದನ್ನು ಡೆಪ್ಯೂಟಿ
ಚನ್ನಬಸಪ್ಪ ಪ್ರತಿಷ್ಠಾನದವರು ನಡೆಸುತ್ತಿದ್ದಾರೆ ಎಂದರು. ಮರಾಠಿ ಭಾಷೆ ಪ್ರಾಬಲ್ಯ
ಮತ್ತು ಮರಾಠಿಮಯ ವಾತಾವರಣ ಅಲ್ಲದೆ ಇಂಗ್ಲಿಷ್ ಆಡಳಿತ ಭಾಷೆಯಾಗಿದ್ದ ಸಂದರ್ಭದಲ್ಲಿ
ಕನ್ನಡಕ್ಕಾಗಿ ಕನ್ನಡ ಶಾಲೆ ಪ್ರಾರಂಭ ಮಾಡಿ ಕನ್ನಡ ಕಲಿಕೆಗೆ ಒತ್ತುಕೊಟ್ಟ
ಮಹಾನುಭಾವರು ಇವರು ಎಂದು ಶ್ರೀಮತಿ ಗೌರದೇವಿ ತಾಳಿಕೋಟಿ ಮಠ ಅವರು ನುಡಿದರು.
ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ
ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಆಶಯವನ್ನು ವಿವರಿಸಿದರು, ಶ್ರೀಮತಿ ಪ್ರತಿಭಾ
ಕಳ್ಳಿಮಠ ಹೊಂದಿಸಿದರು, ವೀರಭದ್ರ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು. ಸೋಮಶೇಖರ
ಹಲಸಿಗಿ ಅತಿಥಿಗಳ ಪರಿಚಯ ಮಾಡಿದರು, ಸುನಿಲ್ ಹಲವಾಯಿ ಸ್ವಾಗತಿಸಿದರು,
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಯ.ರು.
ಪಾಟೀಲ್ , ಶ್ರೀಮತಿ ಜಯಶೀಲಾ ಬ್ಯಾಕೋಡ, ಶ್ರೀರಂಗ ಜೋಶಿ, ಕಸಾಪ ತಾಲೂಕ
ಅಧ್ಯಕ್ಷರುಗಳಾದ ಅಥಣಿಯ ಮಲ್ಲಿಕಾರ್ಜುನ್ ಶೆಟ್ಟಿ, ಬೆಳಗಾವಿಯ ಸುರೇಶ್ ಹಂಜಿ,
ಹುಕ್ಕೇರಿಯ ಪ್ರಕಾಶ್ ಅವಲಕ್ಕಿ ಮತ್ತು ಡಾ.ದಳವಾಯಿ ಮುಂತಾದವರು ಉಪಸ್ಥಿತರಿದ್ದರು.