ಕೆರೆಯಲ್ಲಿ ಮುಳುಗುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿದ ಪೊಲೀಸ್ ಪೇದೆ ಕಾಶಿನಾಥ್ ಈರಗಾರ್

ಬೆಳಗಾವಿ: ಮಹಿಳೆಯೊಬ್ಬರು ಕೆರೆಯಲ್ಲಿ ಮುಳುಗುತ್ತಿದ್ದಾಗ ಕರ್ತವ್ಯ ನಿರತ ಪೋಲಿಸ್ ಪೇದೆಯೊಬ್ಬರು ಸಮವಸ್ತ್ರದಲ್ಲೇ ಮುಳುಗಿ ರಕ್ಷಿಸಿದ ಘಟನೆ ನಗರದಲ್ಲಿ ವರದಿಯಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಗರದ ಬೆಳಗಾವಿ ಕೋಟೆ ಕೆರೆ (ಕಿಲ್ಲಾ ಕೆರೆ)ಯಲ್ಲಿ ಸಂಜೆ 4.45 ರ ಸಮಯದಲ್ಲಿ ಈ ಘಟನೆ ನಡೆದಿದೆ.
ಅಪತ್ಭಾಂಧವನಾಗಿ ಮಹಿಳೆಯನ್ನು ಕಾಪಾಡಿದ ಪೇದೆ ಕಾಶಿನಾಥ್ ಈರಗಾರ್ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಇವರು ಮಾರ್ಕೆಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಉತ್ತರ ವಲಯ ಟ್ರಾಫಿಕ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
42 ವರ್ಷದ ಶಿವಲೀಲಾ ಚನ್ನಗೌಡ ಪರ್ವತ ಗೌಡ್ರು ಸಾಕಿನ್ ಬೈಲವಾಡ್ ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ ಎಂದು ತಿಳಿದು ಬಂದಿದೆ.
ಈ ಮಹಿಳೆ ಪತಿಯ ಜೊತೆ ಜಗಳವಾಡಿಕೊಂಡು ಬಂದು ಕೆರೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಈಕೆ ನೀರಿನಲ್ಲಿ ಮುಳುಗುತ್ತಿದ್ದಾಗ ಅಲ್ಲಿಯೇ ಇದ್ದ ಸ್ಥಳೀಯರು ರಕ್ಷಣೆ ಮಾಡುವಂತೆ ಕೂಗಿ ಕೊಂಡಿದ್ದಾರೆ. ಆಗ ಅಲ್ಲಿ ಕರ್ತವ್ಯದಲ್ಲಿದ್ದ ಕಾಶಿನಾಥ್ ಈರಗಾರ್ ಕ್ಷಣ ಮಾತ್ರವೂ ಚಿಂತಿಸದೆ ಸಮವಸ್ತ್ರದಲ್ಲೇ ನೀರಿನಲ್ಲಿ ಮುಳುಗಿ ಮಹಿಳೆಯನ್ನು ರಕ್ಷಿಸಿದ್ದಾರೆ. ಈಕೆಗೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು, ಅನೇಕ ಸಂಘ ಸಂಸ್ಥೆಗಳು ನಾಗರೀಕ ಮುಖಂಡರು ಪೇದೆ ಕಾಶಿನಾಥ್ ಅವರನ್ನು ಅಭಿನಂದಿಸಿದ್ದಾರೆ.