Belagavi News In Kannada | News Belgaum

ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಹರಿಪ್ರಸಾದ್: ಯಾವ ಬೆಳವಣ ಗೆಯ ಮುನ್ಸೂಚನೆ?

ಮೂಲ ಕಾಂಗ್ರೆಸ್ಸಿಗರಿಗೆ ‘ಹರಿ’ಯ ರೂಪದಲ್ಲಿ ಒದಗಿ ಬಂದ‘ಪ್ರಸಾದ’ ಎಚ್.ಮಾರುತಿ

ಅತ್ತ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ‘ಇಂಡಿಯಾ’ ಹೆಸರಿನಲ್ಲಿ 26 ಪಕ್ಷಗಳನ್ನು ಸೇರಿಸಿಕೊಂಡು ಎನ್‍ಡಿಎ ವಿರುದ್ಧ ಸಂಘಟಿತ ಹೋರಾಟ ನಡೆಸಲು ವೇದಿಕೆ ಸಿದ್ದಪಡಿಸಿಕೊಳ್ಳುತ್ತಿದ್ದರೆ ಇತ್ತ ಪಕ್ಷದ ಹಿರಿಯ ಮುಖಂಡ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಎರಡೂ ಘಟನಾವಳಿಗಳಿಗೆ ಕೇಂದ್ರ ಬಿಂದು ಬೆಂಗಳೂರು ಎನ್ನವುದು ವಿಪರ್ಯಾಸ.

ಮಂಗಳೂರಿನಲ್ಲಿ ನಡೆದ ಈಡಿಗ, ಬಿಲ್ಲವ ಮತ್ತು ದೀವರ ಸಮುದಾಯಗಳ ಸಭೆಯಲ್ಲಿ “ನನಗೆ ಸಿಎಂ ಮಾಡೋದು ಗೊತ್ತು, ಇಳಿಸೋದು ಗೊತ್ತು. ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ. ಎದೆ ಕೊಟ್ಟು ನಿಲ್ಲುತ್ತೇನೆ. ನಾನ ಮಂತ್ರಿ ಆಗುತ್ತೇನೆ ಇಲ್ಲ ಎನ್ನುವುದು ಬೇರೆ ಮಾತು. ಐವರು ಮುಖ್ಯಮಂತ್ರಿಗಳನ್ನು ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದೇನೆ” ಎಂದು ಹರಿಪ್ರಸಾದ್ ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

ಮುಂದುವರೆದು “ಕರ್ನಾಟಕದಲ್ಲಿ ರಾಜಕಿಯವಾಗಿ ಈ ಸಮುದಾಯ ಮುಂದೆ ಬರುತ್ತಿಲ್ಲ. ಪ್ರಯತ್ನಗಳನ್ನು ಮಾಡಿದರೂ ಸಾಧ್ಯವಾಗುತ್ತಿಲ್ಲ. ಅವಕಾಶ ವಂಚಿತರಾಗಿತ್ತಿರುವುದನ್ನು ನೋಡೊದರೆ ಯರದ್ದೋ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಎಂದು ಅನ್ನಿಸುತ್ತದೆ.

2013ರಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದೆವು. ಆ ಬಳಿಕ ನಾವು ಯಾರ ಬಳಿಯೂ ಕೈಚಾಚಲಿಲ್ಲ. ಹಿಂದುಳಿದ ವರ್ಗಕ್ಕೆ ಯಾವ ರೀತಿ ಅನುಕೂಲ ಮಾಡಬೇಕೆಂದು ಯೊಚಿಸುತ್ತೇವೆ. ಸ್ವಾರ್ಥಕ್ಕೆ ಯಾವುದನ್ನೂ ಕೇಳುವುದಿಲ್ಲ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಬಿಲ್ಲವ ಸಮುದಾಯವನ್ನು ಉದ್ದೇಶಿಸಿ ಹೇಳಿದ್ದಾದರೂ ವಾಸ್ತವದಲ್ಲಿ ಸಿದ್ದರಾಮಯ್ಯ ಅವರಿಗೆ ಯಾವ ಸಂದೇಶವನ್ನು ತಲುಪಿಸಬೇಕಿತ್ತೋ ಅದನ್ನು ತಲುಪಿಸುವಲ್ಲಿ ಹರಿಪ್ರಸಾದ್ ಯಶಸ್ವಿಯಾಗಿದ್ದಾರೆ.

ಹರಿಪ್ರಸಾದ್ ರಾಷ್ಟ್ರ ರಾಜಕಾರಣದಲ್ಲಿ ನಾಲ್ಕು ದಶಕಗಳ ಕಾಲ ಪಳಗಿದ ಹುಲಿ. ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಕಿಚನ್ ಕ್ಯಾಬಿನೆಟ್‍ನ ಪ್ರಮುಖ ಸದಸ್ಯ. ಸದಾ ರಾಜ್ಯಸಭಾ ಸದಸ್ಯರಾಗಿದ್ದುಕೊಂಡು ಹಲವು ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿ ವಹಿಸಿದ್ದಾರೆ. ಚುನಾವಣೆಗಳನ್ನು ನಡೆಸಿದ್ದಾರೆ. ಅವರೇ ಹೇಳಿದಂತೆ ಐವರು ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ಪಾತ್ರ ವಹಸಿದ್ದಾರೆ. ಎಲ್ಲವೂ ನಿಜ.

ಮತ್ತೊಬ್ಬ ಹಿಂದುಳಿದ ನಾಯಕ ತಮಗೆ ಪರ್ಯಾಯವಾಗಿ ಇರಬಾರದು ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಇವರನ್ನು ದೂರವಿಟ್ಟಿದ್ದಾರೆ. ಮೇಲ್ಮನೆಯಲ್ಲಿ ವಿಪಕ್ಷ ನಾಯಕರಾಗಿದ್ದ ತಮಗೆ ಸ್ವಾಭಾವಿಕವಾಗಿ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಉದ್ಧೇಶಪೂರ್ವಕವಾಗಿ ತಪ್ಪಿಸಲಾಗಿದೆ. 40 ವರ್ಷ ರಾಜಕಾರಣ ಮಾಡಿರುವ ನಾನು ಸದನದಲ್ಲಿ ಕೊನೆಯ ಸಾಲಿನಲ್ಲಿ ಕುಳಿತು ಎದ್ದು ಬರಬೇಕೆ ಎಂದು ತಮ್ಮ ಆಪ್ತರಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.

ಈಗ ತಮ್ಮ ಅಸಮಾಧಾನವನ್ನು ಏಕೆ ಹೊರಹಾಕಿದ್ದಾರೆ ಎಂದು ಎರಡು ತಿಂಗಳ ಹಿಂದಿನ ರಾಜಕಾರಣದ ಅವಲೋಕನ ಮಾಡಿದರೆ ಅರ್ಥವಾದೀತು. ಪಕ್ಷ ಅಭೂತಪೂರ್ವ ಯಶಸ್ಸಿನೊಂದಿಗೆ ಅಧಿಕಾರಕ್ಕೆ ಬಂದ ನಂತರ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿದ್ದ ಹರಿಪ್ರಸಾದ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಸಿದ್ದರಾಮಯ್ಯ ಅವಕಾಶ ಕಲ್ಪಿಸಲಿಲ್ಲ. ಇವರಿಗೆ ಬದಲಾಗಿ ಇವರದ್ದೇ ಸಮುದಾಯದ ಮಧು ಬಂಗಾರಪ್ಪ ಅವರನ್ನು ಆರಿಸಿಕೊಂಡರು. ಸದನದ ಸದಸ್ಯರೇ ಅಲ್ಲದ ಬೋಸರಾಜು ಅವರನ್ನು ಕರೆ ತಂದು ಮಂತ್ರಿ ಮಾಡಿದ್ದೂ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಮೇಲಾಗಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆ ಬಂದಾಗ ಹರಿಪ್ರಸಾದ್ ಅವರು ಶಿವಕುಮಾರ್ ಅವರ ಪರ ಬ್ಯಾಟಿಂಗ್ ಮಾಡಿದ್ದರು. ದಿಲ್ಲಿಯಲ್ಲಿ ನಡೆದ ಒಂದು ವಾರದ ಹಗ್ಗ ಜಗ್ಗಾಟದಲ್ಲಿ ಹರಿಪ್ರಸಾದ್ ಶಿವಕುಮಾರ್ ಅವರಿಗೆ ಏನೆಲ್ಲಾ ತಂತ್ರಗಳನ್ನು ಅನುಸರಿಸಬೆಕು ಎಂದು ಮಾರ್ಗದರ್ಶನ ಮಾಡಿದ್ದರು.

ಈ ಎಲ್ಲ ಕಾರಣಗಳಿಗಾಗಿ ಸಿದ್ದರಾಮಯ್ಯ ಇವರನ್ನು ದೂರವಿಟ್ಟರು. ಹರಿಪ್ರಸಾದ್ ಅವರ ಒಳಗೆ ಅವಿತುಕೊಂಡಿದ್ದ ಜ್ವಾಲಾಮುಖಿ ಶುಕ್ರವಾರ ಸ್ಫೋಟಗೊಂಡಿದೆ ಅಷ್ಟೇ. ರಾಜಕೀಯದ ಒಳಹೊರಗುಗಳನ್ನು ಅರಿತುಕೊಂಡಿರುವವರಿಗೆ ಇದುವರೆಗೂ ಹರಿ ಏಕೆ ಮುನಿಸಿಕೊಂಡಿಲ್ಲ ಎನ್ನುವುದೇ ಆಶ್ಚರ್ಯವಾಗಿತ್ತು.

ಇದು ಇತಿಹಾಸ. ಭವಿಷ್ಯದಲ್ಲಿ ಏನೆಲ್ಲಾ ಘಟನಾವಳಿಗಳಿಗೆ ಈ ಹೇಳಿಕೆ ಕಾರಣವಾಗಬಹುದು ಎಂದು ನೋಡೋಣ. ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಬಂದ ದಿನದಿಂದಲೂ ಒಬ್ಬೊಬ್ಬರಾಗಿ ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪಾಗುತ್ತಿದ್ದಾರೆ. ಇವರನ್ನು ಪಕ್ಷಕ್ಕೆ ಕರೆತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಎಚ್.ಎಂ.ರೇವಣ್ಣ, ಎಚ್.ವಿಶ್ವನಾಥ್ ಮೊದಲಾದವರೆಲ್ಲಾ ತೆರಮರೆಗೆ ಸರಿದಿದ್ದಾರೆ. ಇಂತಹ ಮತ್ತಷ್ಟು ಹೆಸರುಗಳನ್ನು ಉಲ್ಲೇಖಿಸಬಹುದು.
ಇದರಿಂದ ಮೂಲ ಕಾಂಗ್ರೆಸ್ ನಾಯಕರು ತಾವೇ ಕಟ್ಟಿ ಬೆಳೆಸಿದ ಮನೆಯಲ್ಲಿ ಪರಕೀಯ ಭಾವನೆ ಅನುಭವಿಸುತ್ತಿರುವುದು ಸುಳ್ಳಲ್ಲ. ಆದರೆ ತಮಗೊಬ್ಬ ನಾಯಕನಿಲ್ಲದ ಕಾರಣಕ್ಕೆ ಅವಕಾಶಕ್ಕೆ ಕಾಯುತ್ತಿದ್ದರು

ಅಷ್ಟೇ. ಈಗ ‘ಹರಿ’ಯ ರೂಪದಲ್ಲಿ ‘ಪ್ರಸಾದ’ ಒದಗಿ ಬಂದಿದೆ ಎಂದು ಖುಷಿಪಡಬಹುದು. ಹರಿಪ್ರಸಾದ್ ಈ ವಿಷಯವನ್ನು ಇಲ್ಲಿಗೇ ನಿಲ್ಲಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ. ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು ಅಭಿ ಪಿಕ್ಚರ್ ಬಾಕಿ ಹೈ ಎಂಬ ಅರ್ಥದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಂದರೆ ಮುಂದೆ ಏನು ನಡೆಯಲಿದೆ ಎಂಬುದರ ಮುನ್ಸೂಚನೆ ಇದಾಗಿದೆ. ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿರು ಒಂದಾಗಲಿದ್ದಾರೆಯೇ ?

ಈ ಸಸಿಗೆ ಉಪಮುಖ್ಯಮಂತ್ರಿ ಶಿವಕುಮಾರ್ ನೀರೆರದು ಪೋಷಿಸಲಿದ್ದಾರೆಯೇ ಕಾದು ನೋಡಬೇಕಿದೆ. ಏಕೆಂದರೆ ಒಪ್ಪಂದದ ಪ್ರಕಾರ ಸಿದ್ದರಾಮಯ್ಯ ಅವರು ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡುವ ಸಾಧ್ಯತೆಗಳು ಕಡಿಮೆ. ಅದು ಶಿವಕುಮಾರ್‍ಗೂ ತಿಳಿಯದ ವಿಷಯವೇನಲ್ಲ. ಬಲವಂತವಾಗಿ ಪಡೆದುಕೊಳ್ಳಬೇಕಷ್ಟೇ. ಅದಕ್ಕಾಗಿ ತಮ್ಮ ಬೆಂಬಲಕ್ಕೆ ಪಕ್ಷದೊಳಗಿನ ಒಂದು ಗುಂಪಿನ ಅವಶ್ಯಕತೆ ಇದೆ. ಆ ಗುಂಪಿನ ನಾಯಕ ಹರಿಪ್ರಸಾದ್ ಎಂದು ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಾಗ ಹೈಕಮಾಂಡ್‍ಗೆ ಹೊಸ ಬೇನೆಯೊಂದು ಸುತ್ತಿಕೊಂಡಿದೆ. ಹರಿಪ್ರಸಾದ್ ಬಿಡಿ, ಈಡಿಗ ಸಮುದಾಯ ಮತ್ತು ಇತರ ಹಿಂದುಳಿದ ಸಮುದಾಯಗಳು ತಿರುಗಿ ಬಿದ್ದರೆ ಕಷ್ಟ ಎನ್ನುವುದು ವರಿಷ್ಠರಿಗೆ ತಿಳಿದಿದೆ. ಇದರಿಂದ ಹೊರಬರಲು ಯಾವ ಮಾರ್ಗ ಅನುಸರಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಹರಿಪ್ರಸಾದ್ ಅವರನ್ನು ಸಚಿವರನ್ನಾಗಿ ಮಾಡಲಾಗುತ್ತದೆಯೇ ಅಥವಾ ಪ್ರಬಲ ನಿಗಮ ಮಂಡಲಿಯ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಮಾಡಲಿದೆಯೇ ತಿಳಿದಿಲ್ಲ. ನಿಗಮ ಮಂಡಲಿ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ ಎಂದು ಅವರ ಆಪ್ತ ವಲಯ ಹೇಳುತ್ತದೆ.

ಅಸಹಾಯಕತೆ ಕಾಡುವಾಗ ಯಾವುದೇ ನಾಯಕ ಜಾತಿಯ ಆಶ್ರಯ ಪಡೆಯುತ್ತಾನೆ. ಎಲ್ಲ ಜಾತಿ ಮತ್ತು ಪಕ್ಷಗಳ ಮುಖಂಡರೂ ಅನುಸರಿಸಿರುವುದು ಇದೇ ನೀತಿಯನ್ನೇ. ಹರಿಪ್ರಸಾದ್ ಅವರೂ ಅದನ್ನೇ ಮಾಡಿದ್ದಾರೆ. ಜಾತಿಯ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಇದು ಯಾರ ಎದೆಯನ್ನು ನಾಟುತ್ತದೆ ಕಾದು ನೋಡಬೇಕು.

ಹರಿಯ ಬೆಂಬಲಕ್ಕೆ ಪ್ರಣವಾನಂದ ಸ್ವಾಮೀಜಿ
ಹರಿಪ್ರಸಾದ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ನಮ್ಮ ಸಮುದಾಯ ಕಾಂಗ್ರಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ನಮ್ಮ ಸಮುದಾಯಕ್ಕೆ 11 ಸ್ಥಾನ ನೀಡಬೇಕಿತ್ತು. ಆದರೆ ನೀಡಲಿಲ್ಲ.

ಮಂಗಳೂರು, ಗಂಗಾವತಿ ಕುಮಟಾದಲ್ಲಿ ಟಿಕೆಟ್ ಕೊಡಬೇಕಿತ್ತು ಕೊಡಲಿಲ್ಲ. ನಮ್ಮನ್ನು ಕಡೆಗಣ ಸಿರುವುದು ನಮಗೆ ನೋವು ತಂದಿದೆ ಎಂದು ಹೇಳುವ ಮೂಲಕ ಹರಿಯ ಬೆಂಬಲಕ್ಕೆ ನಿಂತಿದ್ದಾರೆ.