Belagavi News In Kannada | News Belgaum

ಬೋರಗಲ್ ಗ್ರಾಪಂಗೆ ರೇಣುಕಾ ಅಧ್ಯಕ್ಷೆ, ಪ್ರದೀಪ ಉಪಾಧ್ಯಕ್ಷ

 

ಹುಕ್ಕೇರಿ : ತಾಲೂಕಿನ ಬೋರಗಲ್ ಗ್ರಾಮ ಪಂಚಾಯತಿಯ 2ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ರೇಣುಕಾ ವಿಜಯ ಮಾನೆ, ಉಪಾಧ್ಯಕ್ಷರಾಗಿ ಪ್ರದೀಪ ಸುಖದೇವ ಕಾಮಾನಿ ಅವರು ಆಯ್ಕೆಯಾದರು.
ಗ್ರಾಪಂ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಅಮ್ಮಿನಭಾವಿಯ 4ನೇ ವಾರ್ಡನ ರೇಣುಕಾ ಮಾನೆ ಅಧ್ಯಕ್ಷೆಯಾಗಿ, ಬೋರಗಲ್‍ದ 2ನೇ ವಾರ್ಡನ ಪ್ರದೀಪ ಕಾಮಾನಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದರು.
ಅಧ್ಯಕ್ಷ ಸ್ಥಾನಕ್ಕೆ ರೇಣುಕಾ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಇನ್ನು ಉಪಾಧ್ಯಕ್ಷ ಹುದ್ದೆಗೆ ಆಯ್ಕೆ ಬಯಸಿ ಪ್ರದೀಪ ಕಾಮಾನಿ, ಸಂದೀಪ ನೇರ್ಲಿ ಸ್ಪರ್ಧಾ ಕಣದಲ್ಲಿದ್ದರು. ಪ್ರದೀಪ 7 ಮತಗಳನ್ನು ಪಡೆದು ಜಯಭೇರಿ ಬಾರಿಸಿದರೆ, ಪ್ರತಿಸ್ಪರ್ಧಿ ಸಂದೀಪ 5 ಮತಗಳನ್ನು ಪಡೆದು ಪರಾಭವಗೊಂಡರು.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಬೋರಗಲ್, ಅಮ್ಮಿನಭಾವಿ ಗ್ರಾಮಗಳನ್ನು ಒಳಗೊಂಡ ಈ ಪಂಚಾಯತಿಯು ಒಟ್ಟು 13 ಸದಸ್ಯರ ಬಲ ಹೊಂದಿದೆ.
ಲೋಕೋಪಯೋಗಿ ಇಲಾಖೆಯ ಎಇಇ ಎಸ್.ಎಸ್.ಪಟ್ಟಣಶೆಟ್ಟಿ ಚುನಾವಣಾಧಿಕಾರಿಯಾಗಿ, ಪಿಡಿಒ ಬಿ.ಬಿ.ಅಲಗರಾವುತ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಮುಖಂಡರಾದ ಎಸ್.ಎಂ.ಪಾಟೀಲ, ಗಿರೀಶ ಪಾಟೀಲ, ಬಸವರಾಜ ಕೋಳಿ, ಸುರೇಶ ಸಂಕನ್ನವರ, ಮಹೇಶ ಯಡೂರೆ ನೇತೃತ್ವದಲ್ಲಿ ಚುನಾವಣೆ ನಡೆಯಿತು.