ಕೃಷ್ಣಾ ನದಿ ಪಾತ್ರದಲ್ಲಿ 20ಕ್ಕೂ ಹೆಚ್ಚು ಮೊಸಳೆಗಳು ದಿಢೀರ್ ಪ್ರತ್ಯಕ್ಷ..

ರಾಯಚೂರು: ಕೃಷ್ಣಾ ನದಿ ಪಾತ್ರದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ನಿವಾಸಿಗಳು ಕಂಗಾಲ್ ಆಗಿದ್ದಾರೆ. ತಾಲೂಕಿನ ಕುರ್ವಕಲಾ ಬಳಿ ನಿನ್ನೆ 20 ಕ್ಕೂ ಹೆಚ್ಚು ಮೊಸಳೆಗಳ ಗುಂಪು ಪ್ರತ್ಯಕ್ಷವಾಗಿದ್ದು ಜನ ದಿಗಿಲುಗೊಂಡಿದ್ದಾರೆ.
ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಗ್ರಾಮಸ್ಥರ ಕಣ್ಣಿಗೆ ಮೊಸಳೆಗಳು ಬಿದ್ದಿವೆ. ಮತ್ತೊಂದು ವಿಚಾರ ಏನೆಂದರೆ ಮೊಸಳೆಗಳ ಹಿಂಡು ಪ್ರತ್ಯಕ್ಷವಾಗಿದ್ದರೂ ಕೂಡ ಕೆಲವರು ಅದನ್ನು ಲೆಕ್ಕಿಸದೇ ನದಿಪಾತ್ರದಲ್ಲೇ ದೈನಂದಿನ ಕಾರ್ಯದಲ್ಲಿ ಬ್ಯುಸಿ ಆಗಿರೋದು ಆತಂಕ ಮೂಡಿಸಿದೆ.
ಭೀಮಾನದಿಯಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪರಿಣಾಮ ಡೊಂಗರಾಂಪೂರ, ಆತ್ಕೂರು ಹಾಗೂ ನಡುಗಡ್ಡೆ ಗ್ರಾಮಗಳಾದ ಕುರ್ವಕಲಾ, ಕುರ್ವಕುರ್ದಾ ಜನರಲ್ಲಿ ಭಯ ಶುರುವಾಗಿದೆ. ಯಾಕಂದರೆ ನಡುಗಡ್ಡೆಯಿಂದಲೇ ಅಲ್ಲಿನ ನಿವಾಸಿಗಳು ನಿತ್ಯವೂ ಬೋಟ್‌ನಲ್ಲಿ ಓಡಾಟ ಮಾಡಬೇಕಿದೆ. ಸೇತುವೆ ಕಾರ್ಯ ಅಪೂರ್ಣ ಹಿನ್ನೆಲೆ ಜನರಿಗೆ ಇದೀಗ ಮೊಸಳೆಗಳ ಕಾಟ ಶುರುವಾಗಿದೆ.
ರಾಯಚೂರು ತಾಲೂಕಿನ ಡೊಂಗರಾಂಪುರದ ಕೃಷ್ಣಾ ನದಿಪಾತ್ರದಲ್ಲಿಯೂ ಸಾಮಾನ್ಯವಾಗಿ ಮೊಸಳೆಗಳ ಹಾವಳಿ ಹೆಚ್ಚಾಗಿರುತ್ತೆ. ಇದೇ ಕಾರಣಕ್ಕೆ ಮೊಸಳೆಗಳು ಇವೆ ಎಚ್ಚರಿಕೆಯಿಂದ ಇರಿ ಅನ್ನೋ ಸೂಚನಾ ಫಲಕಗಳನ್ನು ಹಿಂದೆ ಹಾಕಲಾಗಿತ್ತು. ಆದರೆ ಅವುಗಳು ಹಾಳಾಗಿ ಹೋಗಿವೆ. ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಲೇ ಮೊಸಳೆಗಳಿಂದ ಜನರ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮತ್ತು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.