ಮೈಸೂರು ಎಕ್ಸ್‌ಪ್ರೆಸ್‌ವೇ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ

ಮಂಡ್ಯ: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪರಿಶೀಲನೆ ನಡೆಸಿದರು. ಅಲ್ಲದೇ ಸ್ಪೀಡ್ ಡಿಟೆಕ್ಟರ್‌ಗೆ ಚಾಲನೆ ನೀಡಿದರು..
ವಾಹನಗಳ ವೇಗವನ್ನ ಸೆರೆಹಿಡಿಯಲು ಹೊಸ ತಂತ್ರಜ್ಞಾನದೊಂದಿಗೆ ಅಳವಡಿಸಲಾಗಿರುವ ಸ್ಪೀಡ್ ಡಿಟೆಕ್ಟರ್‌ಗೆ ಮಂಡ್ಯ ಹೊರವಲಯದ ಉಮ್ಮಡಹಳ್ಳಿ ಗೇಟ್ ಬಳಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಚಲುವರಾಯಸ್ವಾಮಿ, ಶಾಸಕ ಗಣಿಗರವಿ ಸೇರಿದಂತೆ ಹಲವು ಅಧಿಕಾರಿಗಳು ಸಾಥ್ ನೀಡಿದರು..
ಇದಕ್ಕೂ ಮುನ್ನ, ಸಿಎಂ ಆದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಬೃಹತ್ ಹೂವಿನ ಹಾರ ಹಾಕಿ, ಹೂಗುಚ್ಛ ನೀಡಿ ಅವರನ್ನ ಸ್ವಾಗತಿಸಲಾಯಿತು..
ಎಕ್ಸ್‌ಪ್ರೆಸ್‌ವೇನಲ್ಲಿ ಎಐ ಕ್ಯಾಮೆರಾ: ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಎಕ್ಸ್‌ಪ್ರೆಸ್‌ವೇನಲ್ಲಿ ವೇಗ ನಿಯಂತ್ರಣಕ್ಕೆ ಪೊಲೀಸರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೊರೆ ಹೋಗಿದ್ದು ಎಐ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ..
ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಆದೇಶದ ಮೇರೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾವನ್ನ ಅಳವಡಿಕೆ ಮಾಡಲಾಗಿದೆ. ವಾಹನದ ನಂಬರ್‌ನಿಂದ RTO ಸಂಪರ್ಕ ಪಡೆದು ಸವಾರರ ಮೊಬೈಲಿಗೆ ದಂಡ ಪಾವತಿಸುವಂತೆ ನೋಟಿಸ್ ಬರಲಿದೆ..
ಈ ಸಂಬಂಧ ಟ್ವೀಟ್ ಮಾಡಿದ್ದ ಅಲೋಕ್ ಕುಮಾರ್, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳನ್ನ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಅಪಘಾತಗಳು ಮತ್ತು ಸಾವು ನೋವುಗಳ ಸಂಖ್ಯೆಗಳನ್ನು ಕಡಿಮೆ ಮಾಡಲು ಈ ಉಪಕ್ರಮಗಳು ಸಹಾಯ ಮಾಡುತ್ತವೆ ಎಂದು ಭಾವಿಸುತ್ತೇವೆ ಎಂದಿದ್ದರು..