Belagavi News In Kannada | News Belgaum

ಹೊಸೂರ ಗ್ರಾಪಂಗೆ ಆಶಿಯಾ ಅಧ್ಯಕ್ಷೆ, ರಾಮಪ್ಪ ಉಪಾಧ್ಯಕ್ಷ

 

ಹುಕ್ಕೇರಿ : ತಾಲೂಕಿನ ಹೊಸೂರ ಗ್ರಾಮ ಪಂಚಾಯತಿಯ 30 ತಿಂಗಳ ಎರಡನೇ ಅವಧಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಆಶಿಯಾ ಅಕಾನಬಾದಶಾ ಮೊಖಾಶಿ, ಉಪಾಧ್ಯಕ್ಷರಾಗಿ ರಾಮಪ್ಪ ನಿರ್ವಾಣಿ ಮೂಡಲಗಿ ಅವರು ಅವಿರೋಧವಾಗಿ ಆಯ್ಕೆಯಾದರು.
ಗ್ರಾಪಂ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ 2ನೇ ವಾರ್ಡನ ಆಶಿಯಾ ಮೊಖಾಶಿ ಅಧ್ಯಕ್ಷರಾಗಿ, ನಿರ್ವಾನಟ್ಟಿಯ 5ನೇ ವಾರ್ಡ್‍ನ ರಾಮಪ್ಪ ಮೂಡಲಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ಪ್ರಕಟಿಸಿದರು.
ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಈ ಪಂಚಾಯತಿಯು ಒಟ್ಟು 23 ಸದಸ್ಯರ ಬಲ ಹೊಂದಿದೆ. ಹೊಸೂರ, ಯರನಾಳ, ಹುನೂರ, ಇಂಗಳಿ, ನಿರ್ವಾನಟ್ಟಿ ಗ್ರಾಮಗಳನ್ನು ಒಳಗೊಂಡಿದೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್.ಹೊಳೆಪ್ಪ ಚುನಾವಣಾಧಿಕಾರಿಯಾಗಿ, ಪಿಡಿಒ ಮಲ್ಲಿಕಾರ್ಜುನ ಗುಡಸಿ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಈ ಚುನಾವಣೆಯು ಶಾಸಕ ನಿಖಿಲ್ ಕತ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾರ್ಗದರ್ಶನದಲ್ಲಿ ಮುಖಂಡರಾದ ಬಿ.ಬಿ.ಪಾಟೀಲ, ಬಾಹುಬಲಿ ನಾಗನೂರಿ, ಅಶೋಕ ಅಕ್ಕತಂಗೇರಹಾಳ, ವಿಠ್ಠಲ ರಾಮಗೋನಟ್ಟಿ, ಅಪ್ಪಣ್ಣ ತಗಣಿ, ಅಪ್ಪಾಲಾಲ ಮೊಖಾಶಿ, ಸಿದ್ದಗೌಡ ಪಾಟೀಲ, ಕೆಂಪಣ್ಣಾ ಮೊಖಾಶಿ ನೇತೃತ್ವದಲ್ಲಿ ನಡೆಯಿತು.
ಚುನಾವಣೆಯಲ್ಲಿ ತಮ್ಮ ಪರ ಅಭ್ಯರ್ಥಿಗಳು ಅಧ್ಯಕ್ಷ-ಉಪಾಧ್ಯಕ್ಷರಾಗುತ್ತಿದ್ದಂತೆಯೇ ಅವರ ಬೆಂಬಲಿಗರು, ಕಾರ್ಯಕರ್ತರು, ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು.
ಈ ವೇಳೆ ನೂತನ ಅಧ್ಯಕ್ಷೆ ಆಶಿಯಾ ಮೊಖಾಶಿ, ಮಾತನಾಡಿ, ಅಧ್ಯಕ್ಷ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹಿರಿಯರ ಮಾರ್ಗದರ್ಶನ, ಸದಸ್ಯರ ಸಲಹೆ-ಸೂಚನೆ, ಸಿಬ್ಬಂದಿ ವರ್ಗದ ಸಹಕಾರದಿಂದ ಹೊಸೂರ ಗ್ರಾಪಂನ್ನು ಮಾದರಿಯನ್ನಾಗಿ ಮಾಡಲಾಗುವುದು. ಆಯ್ಕೆಗೆ ಶ್ರಮಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.