Belagavi News In Kannada | News Belgaum

ಆರೋಗ್ಯಯುತ ಸಮಾಜಕ್ಕೆ “ಮಹಾಂತ ಜೋಳಿಗೆ” ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ

ವ್ಯಸನಮುಕ್ತ ದಿನಾಚರಣೆ: ಜಾಗೃತಿ ಜಾಥಾ

ಬೆಳಗಾವಿ, ಆ.01: ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕು ಎಂಬ ಆಶಯದೊಂದಿಗೆ ತಮ್ಮ ಜೀವನದುದ್ದಕ್ಕೂ ಗ್ರಾಮ, ರಾಜ್ಯ, ದೇಶ, ವಿದೇಶ ಸುತ್ತಿ ವಿವಿಧ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಕೊಂಡು ವ್ಯಸನ ಮುಕ್ತ ಸಮಾಜಕ್ಕಾಗಿ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು ಎಂದು ಸಾಹಿತಿಗಳು ಹಾಗೂ ಪ್ರವಚನಕಾರರಾದ ಸಿದ್ದಣ್ಣ ಲಂಗೋಟಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಮಂಗಳವಾರ (ಆ.01) ರಂದು ಏರ್ಪಡಿಸಲಾಗಿದ್ದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾಪಕ ಮಠ, ಇಲಕಲ್ಲ ಪೂಜ್ಯ ಲಿಂಗೈಕ್ಯ ಮ. ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ದುಶ್ಚಟಗಳಿಗೆ ಬಲಿಯಾಗಿ ತಮ್ಮ ಇಡೀ ಜೀವನವನ್ನು ಹಾಳು ಮಾಡಿಕೊಂಡು ದುಡಿದ ಹಣವನ್ನು ವ್ಯಸನಗಳಿಗೆ ಖರ್ಚು ಮಾಡಿ ಮದ್ಯಪಾನ ಸೇವನೆಯಿಂದ ಪ್ರಜ್ಞಾಹೀನರಾಗಿ ಅನೇಕ ದುಷ್ಕೃತ್ಯಗಳನ್ನು ಮಾಡುವ ಮೂಲಕ ತಾವು ಹಾಳಾಗುವುದಲ್ಲದೆ ತಮ್ಮ ಜೊತೆಗೆ ಇರುವ ಕುಟುಂಬ, ಗ್ರಾಮ, ರಾಜ್ಯ, ದೇಶ, ವಿದೇಶಗಳಲ್ಲಿರುವ ಜನರನ್ನೂ ಸಹ ಹಾಳು ಮಾಡುತ್ತಾರೆ ಆದ್ದರಿಂದ ಜನರು ಜಾಗೃತರಾಗಿ ವ್ಯಸನಮುಕ್ತರಾರಗಬೇಕು ಎಂದು ಹೇಳಿದರು.

ತಂಬಾಕು ಎಂದರೆ ನಮ್ಮ ಜೀವನವನ್ನೂ ನಮ್ಮ ಕೈಯಿಂದಲೇ ಹಾಳು ಮಾಡುವುದೇ ತಂಬಾಕು, ಹೀಗಾಗಿ ಮಕ್ಕಳು ಇಂತಹ ಅನೇಕ ದುಶ್ಚಟಗಳಿಗೆ ಬಲಿಯಾಗದೇ, ದುಶ್ಚಟಗಳಿಗೆ ಖರ್ಚು ಮಾಡುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ವಾಗುವ ಪುಸ್ತಕ ಗಳಿಗೆ ಖರ್ಚು ಮಾಡಿದರೆ ವ್ಯಸನಮುಕ್ತ ಸಮಾಜವಾಗುವುದು ಎಂದು ಹೇಳಿದರು.

ದುಶ್ಚಟಗಳ ಬಗ್ಗೆ ವಯಸ್ಸು ಆದವರಿಗೆ ತಿಳಿಸಿದರೆ ಮುಂದಿನ ಜನ್ಮದಲ್ಲಿ ಸುಧಾರಣೆ ಆಗಲು ಅವಕಾಶ ನೀಡಿದಂತೆ ಆದ್ದರಿಂದ ಅದೇ ವಿಚಾರವನ್ನು ಇವತ್ತಿನ ಮಕ್ಕಳಗೆ ತಿಳಿಸಿದರೆ ದುಶ್ಚಟಗಳಿಂದ ದೂರವಾಗುವುದಷ್ಟೇ ಅಲ್ಲದೆ ದೀರ್ಘಾಯುಷ್ಯರಾಗಿ ಜೀವಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

 

ತಮ್ಮ ಅಂತಿಮ ದಿನಗಳಲ್ಲಿಯೂ ಸಹ ಸಮಾಜದ ಆರೋಗ್ಯದ ಬಗ್ಗೆ ಕಳಕಳಿ ಹೊಂದಿದ್ದ ಮಹಾಂತ ಶ್ರೀಗಳು, ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು “ಡಾಕ್ಟರ್ ಗಳ ಡಾಕ್ಟರ್” ಎನಿಸಿಕೊಂಡವರು ಮಹಾಂತ ಶಿವಯೋಗಿ ಗಳು ಎಂದು ಸಿದ್ದಣ್ಣ ಲಂಗೋಟಿ ಹೇಳಿದರು.

ತಮ್ಮ ವೈಯಕ್ತಿಕ ಜೀವನನ್ನು ಮುಡಿಪಾಗಿಟ್ಟು, ಜೋಳಿಗೆ ತೆಗೆದುಕೊಂಡು ಮನೆ ಮನೆಗೆ ಭೇಟಿ ನೀಡಿ, ಸಮಾಜದ ಜನರಲ್ಲಿ ದುಶ್ಚಟಗಳ ಬಗ್ಗೆ ಅರಿವು ಮೂಡಿಸಿದವರು ಮಾಹಾಂತ ಶಿವಯೋಗಿಗಳು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಹೇಳಿದರು.

 

ದುಶ್ಚಟಗಳಿಂದ ದೇಹಕ್ಕೆ ಅಷ್ಟೇ ಅಲ್ಲದೆ ಮನಸ್ಸಿನ ಮೇಲೆಯೂ ಇದರ ಪರಿಣಾಮ ಬೀರುತ್ತದೆ. ಮಕ್ಕಳು ಮುಗ್ದರು, ದುಶ್ಚಟಗಳ ಅರಿವು ಇರುವುದಿಲ್ಲ ಆದ್ದರಿಂದ ಇಂತಹ ಶಿವಯೋಗಿಗಳ ತತ್ವ ಸಿದ್ಧಾಂತಗಳನ್ನು ತಿಳಿದುಕೊಂಡು ದುಶ್ಚಟಗಳಿಂದ ದೂರವಿರಬೇಕು. ತಾವು ಇರುವುದಷ್ಟೇ ಅಲ್ಲದೇ ತಮ್ಮ ಸಹಪಾಠಿಗಳು ಅಥವಾ ಸ್ನೇಹಿತರು ದುಶ್ಚಟಗಳನ್ನು ಮಾಡುತ್ತಿದ್ದರೆ ಶಿಕ್ಷಕರ ಗಮನಕ್ಕೆ ತರಬೇಕು ಎಂದು ಹೇಳಿದರು.

 

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಉಪದೇಶಕರಾದ ಬಸವರಾಜ ನಾಲತವಾಡ ಅವರು, ಮಹಾಂತ ಶಿವಯೋಗಿಗಳ ತತ್ವ ಸಿದ್ಧಾಂತ ವಿಚಾರಧಾರೆಗಳನ್ನು ಮಕ್ಕಳು ತಿಳಿದುಕೊಂಡು ನಿಮ್ಮ ಸ್ನೇಹಿತರಿಗೂ ತಿಳಿಸುವ ಮೂಲಕ ವ್ಯಸನಮುಕ್ತ ಸಮಾಜಕ್ಕೆ ಮಕ್ಕಳ ಕೊಡುಗೆಯು ಮುಖ್ಯವಾಗಿದೆ ಎಂದರು.

 

ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರ ಅವರು, ಮಹಾಂತ ಶಿವಯೋಗಿಗಳು 80 ರ ದಶಕದಲ್ಲಿ ದುಶ್ಚಟಗಳ ಜೋಳಿಗೆ ಹಾಕಿಕೊಂಡು ದೇಶ-ವಿದೇಶ ಗಳಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆಯಿತು ಎಂದು ಹೇಳಿದರು.

ದುಶ್ಚಟಗಳಾದ ಮದ್ಯಪಾನ, ಧೂಮಪಾನದಿಂದ ಜನರು ಅಕಾಲಿಕ ಮರಣ ಹೊಂದುವುದನ್ನು ನೋಡಿ ಮಹಾಂತ ಶಿವಯೋಗಿಗಳು ದುಶ್ಚಟಗಳಿಗೆ ಬಲಿಯಾದ ರಾಜ್ಯ,ದೇಶ ಸುತ್ತುವುದರ ಜೊತೆಗೆ ಅವರ ಮನೆ ಮನೆಗೆ ಭೇಟಿ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು, ಎಲ್ಲರಿಗೂ ಅರಿವು ಮೂಡಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದರು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಚಾಂದನಿ ದೇವಡಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಉಪನ್ಯಾಸ ನೀಡಿದ ಸಿದ್ದಣ್ಣ ಲಂಗೋಟಿ ದಂಪತಿಯನ್ನು ಸನ್ಮಾನಿಸಲಾಯಿತು. ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

ಮಾದಕ ವ್ಯಸನ-ಜಾಗೃತಿ ಜಾಥಾ:

ಮದ್ಯಪಾನ, ಮಾದಕ ವ್ಯಸನ ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿತು ಅರಿವು ಮೂಡಿಸಲು ನಗರದ ಅರ್.ಟಿ.ಓ. ವೃತ್ತದಿಂದ ಜಾಗೃತಿ ಜಾಥಾ ನಡೆಸಲಾಯಿತು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಅವರು ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿಸಿದರು.

 

ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜ ನಾಲತವಾಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಚಾಂದನಿ ದೇವಡಿ ಮತ್ತಿತರರು ಸೇರಿ ಉಪಸ್ಥಿತರಿದ್ದರು.

ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಹಾಗೂ ಪಾಲ್ಗೊಂಡಿದ್ದರು.