Belagavi News In Kannada | News Belgaum

ಪತ್ನಿ, ಮಗಳನ್ನು ಕೊಂದ ಯೋಧನ ಬಂಧನ

ಜೋಧ್ಪುರ: ರಾಜಸ್ಥಾನದ ಜೋಧ್ಪುರದಲ್ಲಿರುವ ಸೇನಾ ಕ್ವಾಟರ್ಸ್ ನಲ್ಲಿ ಭಾನುವಾರ ಬೆಳಗ್ಗೆ ತನ್ನ ಪತ್ನಿ ಮತ್ತು ಮಗಳನ್ನು ಹತ್ಯೆ ಮಾಡಿ, ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಅಗ್ನಿ ಅವಘಡದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದ ಭಾರತೀಯ ಸೇನೆಯ ಯೋಧನನ್ನು ಬಂಧಿಸಿರುವುದಾಗಿ ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕತ್ತು ಹಿಸುಕಿ ಮತ್ತು ಬೆಂಕಿ ಹಚ್ಚಿ ಹತ್ಯೆ ಮಾಡಿರುವುದು ಪತ್ತೆಯಾದ ನಂತರ ಆರೋಪಿ, ಭಾರತೀಯ ಸೇನೆಯಲ್ಲಿ ನಾಯಕ್ ಆಗಿರುವ ರಾಮ್ ಪ್ರಸಾದ್ ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಕುಟುಂಬಸ್ಥರು ಆಗಮಿಸಿದ ನಂತರ ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಡಿಸಿಪಿ (ಪೂರ್ವ) ಅಮೃತಾ ದುಹಾನ್ ಅವರು ತಿಳಿಸಿದ್ದಾರೆ.

ತಾಯಿ ಮತ್ತು ಮಗಳು ಇಬ್ಬರನ್ನೂ ಮೊದಲು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಪೆಟ್ರೋಲ್ ಹಾಕಿ ಸುಟ್ಟು ಹಾಕಲಾಗಿದೆ ಎಂದು ಮರಣೋತ್ತರ ವರದಿಯಲ್ಲಿ ತಿಳಿಸಲಾಗಿದೆ ಎಂದು ದುಹಾನ್ ಹೇಳಿದ್ದಾರೆ. ವರದಿಯ ಆಧಾರದ ಮೇಲೆ, ಪೊಲೀಸರು ರಾಮ್ ಪ್ರಸಾದ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರು ತಮ್ಮ ಪತ್ನಿ ರುಕ್ಮೀನಾ(25) ಮತ್ತು ಮಗಳು ರಿಧಿಮಾ(2) ಅವರನ್ನು ಕೊಂದಿರುವುದಾಗಿ ಒಪ್ಪಿಕೊಂಡರು ಎಂದು ಅಧಿಕಾರಿ ತಿಳಿಸಿದ್ದಾರೆ. ಸಿಕ್ಕಿಂ ಮೂಲದ ರಾಮ್ ಪ್ರಸಾದ್ ಅವರು ನೇಪಾಳ ಮೂಲದ ರುಕ್ಮೀನಾ ಅವರನ್ನು ಜನವರಿ 2020 ರಲ್ಲಿ ಮದುವೆಯಾಗಿದ್ದರು.