Belagavi News In Kannada | News Belgaum

ಮಕ್ಕಳು, ಗರ್ಭಿಣಿಯರು ಲಸಿಕೆ ಅತ್ಯಗತ್ಯ: ಡಾ.ಶಿವಾನಂದ ಮಾಸ್ತಿಹೂಳಿ

ನಗರ ಮಟ್ಟದ ಸಾರ್ವತ್ರಿಕ ಲಸಿಕೆ ಮತ್ತು ಇಂದ್ರಧನುಷ 5.0 ಕಾರ್ಯಪಡೆ ಸಭೆ

ಬೆಳಗಾವಿ, ಆ.02 : ಒಂದು ದೇಶ ಅಭಿವೃದ್ಧಿಯಾಗಬೇಕೆಂದರೆ ಅಲ್ಲಿರುವ ಮಕ್ಕಳು ಆರೋಗ್ಯ, ಪ್ರಜ್ಞಾವಂತ, ದೈಹಿಕವಾಗಿ, ಶಾರೀರಿಕವಾಗಿ ಸದೃಢವಾಗಿರಬೇಕು. ಆದ್ದರಿಂದ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ನೀಡಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿಗಳಾದ ಶಿವಾನಂದ ಮಾಸ್ತಿಹೊಳಿ ಅವರು ಹೇಳಿದರು.
ಮಹಾನಗರ ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ಬುಧವಾರ (ಆ.02) ನಡೆದ ನಗರ ಮಟ್ಟದ ಸಾರ್ವತ್ರಿಕ ಲಸಿಕೆ ಮತ್ತು ಇಂದ್ರಧನುಷ 5.0 ಕಾರ್ಯಪಡೆ ಸಭೆಯಲ್ಲಿ ಅವರು ಮಾತನಾಡಿದರು.
ಲಸಿಕಾಕರಣ ಮೂಲಕ ಭಾರತದಲ್ಲಿ ಕೋವಿಡ್ ರೋಗವನ್ನು ಹೇಗೆ ನಿರ್ಮೂಲನೆ ಮಾಡಲಾಯಿತೋ ಅದೇ ರೀತಿಯಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಪೋಲಿಯೋ, ದಢಾರ, ರುಬೇಲ್ಲಾ, ಕ್ಷಯರೋಗ ಹಾಗೂ ಇನ್ನಿತರ ರೋಗಗಳನ್ನು ತಡೆಗಟ್ಟುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಭಾರತ ಸರ್ಕಾರ ಹಂತ ಹಂತವಾಗಿ ಮಕ್ಕಳಿಗೆ ಉಚಿತ ಲಸಿಕೆಯನ್ನು ನೀಡುತ್ತದೆ. ಆದ್ದರಿಂದ ಲಸಿಕೆ ವಂಚಿತ ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಿಸಬೇಕು ಎಂದು ಶಿವಾನಂದ ಮಾಸ್ತಿಹೊಳಿ ಹೇಳಿದರು.
ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ಭಯ ಇರುವುದು. ಲಸಿಕೆ ನೀಡಿದಾಗ ಜ್ವರ ಬರುವುದು ಸಹಜ. ಇದರಿಂದ ಅನೇಕ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆ ವಂಚಿತರಾಗಿರುತ್ತಾರೆ. ಅಂಥವರಿಗೆ ಲಸಿಕೆ ಬಗ್ಗೆ ಸೂಕ್ತ ಮಾಹಿತಿ ಕೊಟ್ಟು ಲಸಿಕೆ ಹಾಕಿಸಿಕೊಳ್ಳಲು ಸೂಚಿಸಿ ಎಂದು ಬೆಳಗಾವಿಯ WHO ಪ್ರತಿನಿಧಿಯಾದ ಡಾ. ಸಿದ್ದಲಿಂಗಯ್ಯಾ ಅವರು ಹೇಳಿದರು.
https://uwinselfregistration.mohfw.gov.in/ಲಿಂಕನ್ನು ಬಳಸಿಕೊಂಡು ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಚಿಕ್ಕಮಕ್ಕಳ ಅಥವಾ ಗರ್ಭಿಣಿ ಮಹಿಳೆಯರ ಬಾಕಿ ಇರುವ ಲಸಿಕೆಗಳನ್ನು ಪಡೆಯಲು ನೋಂದಣಿ ಮಾಡಿಕೊಳ್ಳಬಹುದು ಹಾಗೂ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು ಎಂದುರು.
ಶಾಲೆಗಳಲ್ಲಿ ಶಿಕ್ಷಕರರು, ಆಶಾ ಕಾರ್ಯಕರ್ತೆಯರು ಲಸಿಕೆ ಜಾಗೃತ ಜಾತಾ ವಿವಿಧ ಸಭೆ ಮಾಡಿ ಮಕ್ಕಳಿಗೆ ಲಸಿಕೆ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕಿಸಿ ಇದನ್ನು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಿ ಎಂದು ಬೆಳಗಾವಿ ಜಿಲ್ಲಾ R C H ಅಧಿಕಾರಿಗಳಾದ ಚೇತನ ಕಂಕಣವಾಡಿ ಅವರು ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಶೋಭಾ ಸೋಮನಾಚೆ ಅವರು ಸಸಿಗೆ ನೀರರೆಯುವ ಮೂಲಕ ಸಭೆಗೆ ಚಾಲನೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಉಪ ಮೇಯರ್ ರೇಷ್ಮಾ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ, ಮಹೇಶ ಕೋಣಿ, ಆರೋಗ್ಯ ಅಧಿಕಾರಿಗಳಾದ ಡಾ. ಸಂಜಯ ಡುಮ್ಮಗೋಳ, ಸ್ಥಾಯಿ ಸಮಿತಿಯ ಸದಸ್ಯರಾದ ರವಿ ಧೋತ್ರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇಂದ್ರ ಧನುಷ್ ಲಸಿಕೆಗೆ ಸಂಬಂಧಿಸಿದ ಕರ ಪತ್ರಗಳನ್ನು ಮತ್ತು ವಿಡಿಯೋವನ್ನು ಬಿಡುಗಡೆಗೊಳಿಸಲಾಯಿತು.