Belagavi News In Kannada | News Belgaum

ನಿವೃತ್ತ ಸತ್ಕಾರ ಸಮಾರಂಭ ಎಂಸ್ಸೆಸ್ಸೆಆರ್ ಶಾಲೆ ಕೊಡುಗೆ ಅಪಾರ: ಉಳವಪ್ಪ ತುರಮರಿ

ಬೈಲಹೊಂಗಲ : ಬೈಲಹೊಂಗಲ ನಾಡಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎಂಸ್ಸೆಸ್ಸೆಆರ್ ಪ್ರೌಢಶಾಲೆ ಶಿಕ್ಷಣ ಕ್ರಾಂತಿ ಮಾಡುತ್ತಿದೆ. ಬಡ-ಮಧ್ಯಮ ವರ್ಗದವರ ಮಕ್ಕಳ ಏಳ್ಗೆಗೆ ಶಾಲೆ ಶ್ರಮಿಸುತ್ತಿದೆ ಎಂದು ನಿವೃತ್ತ ಮುಖ್ಯಾಧ್ಯಾಪಕ ಉಳವಪ್ಪ ತುರಮರಿ ಹೇಳಿದರು.
ಪಟ್ಟಣದ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ (ಎಂಸ್ಸೆಸ್ಸೆಆರ್) ಪ್ರೌಢ ಶಾಲೆಯಲ್ಲಿ ನಡೆದ ವಯೋನಿವೃತ್ತಿಯ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 111 ವರ್ಷಗಳ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಸೇವೆ ಮಾಡಿದ್ದು ಭಾಗ್ಯವಾಗಿದೆ. ನನ್ನ ಅವಧಿಯಲ್ಲಿ ದಾನಿಗಳಿಂದ ಮತ್ತು ಪುರಸಭೆಯಿಂದ ಹತ್ತು ಲಕ್ಷ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಸಂತಸ ತರಿಸಿದೆ. ಶಾಲೆ ಈ ನಾಡಿನ ಸ್ಮಾರಕವಾಗಿದ್ದು, ಎಲ್ಲರೂ ಸೇರಿ ಉಳಿಸಿ ಬೆಳೆಸಬೇಕಾಗಿದೆ. ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು.
ಮುಖ್ಯ ಅತಿಥಿ, ನಿವೃತ್ತ ಮುಖ್ಯಾಧ್ಯಾಪಕ ರಮೇಶ ಪಾರಿಶ್ವಾಡ, ಗಣಿತ ತಜ್ಞ ಈಶ್ವರ ಹೋಟಿ ಮಾತನಾಡಿ, ಯು.ಎಂ.ತುರಮರಿ ಆದರ್ಶ ಶಿಕ್ಷಕರಾಗಿ 35 ವರ್ಷಗಳ ಸೇವೆ ಸಲ್ಲಿಸಿದ್ದು, ಶ್ಲಾಘನೀಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶಾಲೆಯ ಇತಿಹಾಸವನ್ನು ಮೆಲುಕು ಹಾಕಿದರು.
ನೂತನ ಮುಖ್ಯಾಧ್ಯಾಪಕ ಎಂ.ಸಿ.ಹಂಗರಕಿ ಅಧ್ಯಕ್ಷತೆವಹಿಸಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಉರ್ದು ಶಾಲೆ ಮುಖ್ಯಾಧ್ಯಾಪಕ ಮಹಾಂತೇಶ ಮತ್ತಿಕೊಪ್ಪ, ನಿವೃತ್ತ ಮುಖ್ಯಾಧ್ಯಾಪಕ ಎಂ.ವಿ.ನಾಗನೂರ, ನಿವೃತ್ತ ಶಿಕ್ಷಕಿ ಸುಲೋಚನಾ ಹೊಸಮನಿ, ಶಿಕ್ಷಕಿ ಮಹಾದೇವಿ ಅಂಗಡಿ ಅತಿಥಿಗಳಾಗಿ ಆಗಮಿಸಿದ್ದರು.
ಯು.ಎಂ.ತುರಮರಿ ಹಾಗೂ ಪತ್ನಿ ಸುಮಿತ್ರಾ ತುರಮರಿ ಅವರನ್ನು ಸನ್ಮಾನಿಸಲಾಯಿತು. ಹುಬ್ಬಳ್ಳಿಯ ಪ್ರಸಿದ್ಧ ವೈದ್ಯರಾದ ಡಾ.ಪ್ರಶಾಂತ ಚನ್ನವೀರಪ್ಪನವರ, ಡಾ.ರಶ್ಮಿ ತುರಮರಿ, ಇಂಜನೀಯರಾದ ಸಂಗಮೇಶ ದಾನಶೆಟ್ಟಿ, ರಂಜನಿ ತುರಮರಿ, ಡಾ.ವಿನಯಕುಮಾರ ತುರಮರಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ಬಿ.ಆರ್.ಬೋರಗಲ್ಲ ಸ್ವಾಗತಿಸಿದರು. ಶಿಕ್ಷಕ ಕಿರಣ ದಂಡಾವತಿಮಠ ನಿರೂಪಿಸಿದರು. ಶಿಕ್ಷಕ ಪ್ರಕಾಶ ಹಸರಂಗಿ ವಂದಿಸಿದರು.
ಸೇವೆ ಸ್ಮರಣೀಯ:
ಉಳವಪ್ಪ ತುರಮರಿ ಅವರ ಸೇವೆ ಸ್ಮರಣೀಯವಾಗಿದೆ ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಹೇಳಿದರು. ಅವರನ್ನು ಖಾಸಗಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು. ಉದ್ಯಮಿ ವಿಜಯ ಮೆಟಗುಡ್ಡ, ಶಿಕ್ಷಣಾಧಿಕಾರಿ ಪ್ರಕಾಶ ಮಾಸ್ತಿಹೊಳಿ, ನಿವೃತ್ತ ಅಧಿಕಾರಿ ಬಾಳಪ್ಪ ತುರಮರಿ, ಬಸಪ್ಪಾ ಹಮ್ಮಿನಿ ಸೇರಿದಂತೆ ಅನೇಕ ಗಣ್ಯರು, ತುರಮರಿ ಕುಟುಂಬದವರು, ಸ್ನೇಹಿತರು ಉಪಸ್ಥಿತರಿದ್ದರು.