Belagavi News In Kannada | News Belgaum

ದೇಶವನ್ನು ದಿವಾಳಿ ಮಾಡಿದ್ದು ಪ್ರಧಾನಿ ಮೋದಿ ಎಂದ ಸಿಎಂ ಸಿದ್ದರಾಮಯ್ಯ

ಕಲಬುರಗಿ: ಬಿಜೆಪಿಗೆ ತಾಕತ್ತಿದ್ದರೆ ಐದು ಗ್ಯಾರಂಟಿಗಳನ್ನು ಇಡೀ ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿ ಮಾಡುವ ತೀರ್ಮಾನವನ್ನು ಮಾಡಲಿ ಎಂದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು..

 

ಶನಿವಾರ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಕಲಬುರಗಿಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಐದು ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಯಾರಿಗೂ ಅಪನಂಬಿಕೆ ಬೇಡ. ವಿರೋಧ ಪಕ್ಷದವರು ಈ ಬಗ್ಗೆ ಗುಲ್ಲೆಬ್ಬಿಸುತ್ತಿದ್ದಾರೆ. ವಿರೋಧ ಪಕ್ಷದವರಲ್ಲದೇ ಈ ದೇಶದ ಪ್ರಧಾನಿಗಳು ಕೂಡ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿಲ್ಲ. ಈ ದೇಶವನ್ನು ದಿವಾಳಿ ಮಾಡಿರುವುದು ನರೇಂದ್ರ ಮೋದಿಯವರು ಎಂದು ಸಿದ್ದರಾಮಯ್ಯ ಹೇಳಿದರು..

 

ʻʻಕರ್ನಾಟಕ ಹಿಂದೆ ಎಲ್ಲ ಭರವಸೆಗಳನ್ನು ಈಡೇರಿಸಿದಾಗ ಆರ್ಥಿಕವಾಗಿ ಸುಭದ್ರವಾಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಸಂಪತ್ತನ್ನು ಲೂಟಿ ಮಾಡಿ, ಬೆಲೆ ಏರಿಕೆ ಮಾಡಿ, ನಿರುದ್ಯೋಗದ ಸಮಸ್ಯೆಯನ್ನು ಹೆಚ್ಚು ಮಾಡಿ, ರಾಜ್ಯದ ಬಡವರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದು ಬಿಜೆಪಿ ಸರ್ಕಾರʼʼ ಎಂದು ಸಿದ್ದರಾಮಯ್ಯ ಹೇಳಿದರು..

 

ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಕರ್ನಾಟಕದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರ ಗಳು ಸೇರಿ ರಾಜ್ಯವನ್ನು ಹಿಂದುಳಿಯುವಂತೆ ಮಾಡಿದರು ಎಂದು ಆರೋಪಿಸಿದ ಸಿದ್ದರಾಮಯ್ಯ, ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡುತ್ತಿರುವುದರಿಂದ ಹೊಟ್ಟೆಉರಿಯಿಂದ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದರು. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರನ್ನು ಬದಲಾಯಿಸಿದ್ದೇ ಬಿಜೆಪಿ ಕೊಡುಗೆ. ಉಳಿದಂತೆ ಅವರು ಯಾವುದೇ ಕೊಡುಗೆ ಕೊಟ್ಟಿಲ್ಲ ಎಂದರು..

 

ʻʻವಿರೋಧ ಪಕ್ಷದವರು ಅನ್ನಭಾಗ್ಯ ಕಾರ್ಯಕ್ರಮದ ಬಗ್ಗೆಯೂ ಗುಲ್ಲೆಬ್ಬಿಸಿದರು. ಬಡವರ ವಿರೋಧಿ ಸರ್ಕಾರ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಾಗಿ ಮೊದಲು ಒಪ್ಪಿಗೆ ನೀಡಿ, ನಂತರ ಅಕ್ಕಿ ಕೊಡದೇ ರಾಜಕೀಯ ಮಾಡಿದರು. ರೂ. 34 ರಂತೆ ಹಣ ಕೊಡುತ್ತೇವೆ ಎಂದರೂ ಅವರು ಬಡವರಿಗೆ 5 ಕೆಜಿ ಅಕ್ಕಿಯನ್ನು ನೀಡಲಿಲ್ಲʼʼ ಎಂದು ಆಪಾದಿಸಿದರು ಸಿದ್ದರಾಮಯ್ಯ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾವು ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 4 ಕೆಜಿಗೆ ಇಳಿಸಿದ್ದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಬಡತನ ಹಿಂಸೆಯ ಅತಿ ಕೆಟ್ಟ ರೂಪ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ ಎಂದು ನೆನಪಿಸಿದರು..

 

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂಧನ ಸಚಿವ ಕೆ.ಜೆ.ಜಾರ್ಜ್, ಕಲಬುರಗಿ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್, ಶರಣಪ್ರಕಾಶ ಪಾಟೀಲ್ ದರ್ಶನಾಪುರ್, ಶಾಸಕರಾದ ಅಲ್ಲಂಪ್ರಭು, ಕನೀಜ್ ಫಾತಿಮಾ, ಬಿ.ಆರ್.ಪಾಟೀಲ್, ಎಂ.ವೈ ಪಾಟೀಲ್ ಉಪಸ್ಥಿತರಿದ್ದರು.