ಸರ್ಕಾರಿ ಶಾಲಾ ಮಕ್ಕಳಿಗೆ ಮಾದರಿ ಭೋಜನಾಲಯ
ನರೇಗಾದಡಿ ನಿರ್ಮಾಣ, ಒಂದೇ ಸೂರಿನಡಿ ಹಲವು ಪ್ರಯೋಜನ

ಹುಕ್ಕೇರಿ: ಆಟದ ಮೈದಾನ, ಕಂಪೌಂಡ್, ಶೌಚಗೃಹ ನಿರ್ಮಿಸಿ ಸರ್ಕಾರಿ ಶಾಲೆಗಳಿಗೆ ಮೆರಗು ನೀಡುತ್ತಿರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಇದೀಗ ಹುಕ್ಕೇರಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಮಾದರಿ ಭೋಜನಾಲಯಗಳ ನಿರ್ಮಾಣಕ್ಕೆ ನೆರವಾಗಿ ಗಮನ ಸೆಳೆದಿದೆ.
ಕೆಲವೇ ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಮೂಲ ಸೌಕರ್ಯವೂ ಇರಲಿಲ್ಲ. ಕೂರಲು, ಊಟ ಮಾಡಲು ಸ್ಥಳ ಇರಲಿಲ್ಲ. ಇದು ಮಕ್ಕಳ ಕಲಿಕೆಯೂ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು. ಆದರೀಗ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾರ್ಯಗಳು ಶಾಲೆಯ ಚಿತ್ರಣವನ್ನೇ ಬದಲಿಸುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಅಭಿವೃದ್ಧಿ ನೋಡಿ ಮೆಚ್ಚುಗೆ ಮಾತಗಳನ್ನಾಡುವಂತಾಗಿದೆ. ನರೇಗಾ ಅಡಿಯಲ್ಲಿ ಈಗಾಗಲೇ ಶಾಲೆಗಳ ಆಟದ ಮೈದಾನ, ಕಂಪೌಂಡ್, ಮೇಲ್ಛಾವಣಿ, ಕಟ್ಟಡ ಇತರ ಅಭಿವೃದ್ಧಿ ಕೆಲಸಗಳು ಕಾರ್ಯಗತಗೊಳ್ಳುತ್ತಿವೆ.
ಇನ್ನು ಇಂದು ಹೆಜ್ಜೆ ಮುಂದೆ ಹೋಗಿರುವ ಅಧಿಕಾರಿಗಳು ಹಲವು ಸರ್ಕಾರಿ ಶಾಲೆಗಳಲ್ಲಿ ಭೋಜನಾಲಯ ನಿರ್ಮಿಸುವ ಮೂಲಕ ಒಂದೇ ಸೂರಿನಡಿ ಹಲವು ಪ್ರಯೋಜನಗಳು ಸಿಗುವಂತೆ ಮಾಡಿದ್ದಾರೆ.
ಶಾಲೆಗಳಲ್ಲಿ ಹೈಟೆಕ್ ಭೋಜನಾಲಯ ನಿರ್ಮಿಸುವ ಕಾರ್ಯದಲ್ಲಿ ಹುಕ್ಕೇರಿ ತಾಲೂಕು ಬೆಳಗಾವಿ ಜಿಲ್ಲೆಗೆ ಮಾದರಿಯಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ಸ್ಥಳಾವಕಾಶದ ಲಭ್ಯತೆ ಮೇಲೆ ಅಂದಾಜು 6 ರಿಂದ 16 ಲಕ್ಷದವರೆಗೆ ಭೋಜನಾಲಯ ನಿರ್ಮಾಣವಾಗಿವೆ.
2021-22 ರಿಂದ ಇಲ್ಲಿಯವರೆಗೆ 138 ಭೋಜನಾಲಯಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 68 ಭೋಜನಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು 70 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ.
ಈ ನಿಟ್ಟಿನಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ಪಂಚಾಯತ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳು ಹಾಗೂ ನರೇಗಾ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.
ವಿಶೇಷ ಮೆರಗು: ಸರ್ಕಾರಿ ಶಾಲೆ ಮಕ್ಕಳು ಊಟ ಮಾಡಲು ಸೂಕ್ತ ವ್ಯವಸ್ಥೆಯಿಲ್ಲದೆ ಬಿಸಿಲು, ಗಾಳಿಯಲ್ಲಿ ಕುಳಿತು ಊಟ ಮಾಡುತ್ತಿದ್ದರು. ಸುಸಜ್ಜಿತ ಕಟ್ಟಡದಲ್ಲಿ ಸೂಕ್ತ ನೆರಳು ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ಬಿಸಿಯೂಟ ಸವಿಯುತ್ತಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಗಳಿಗೆ ವಿಶೇಷ ಮೆರಗು ಬಂದಿದೆ.
ಏನೇನು ಅನುಕೂಲ : ಮಕ್ಕಳು ಕುಳಿತುಕೊಂಡು ಊಟ ಮಾಡಲು ವಿಶಾಲವಾದ ಸ್ಥಳ, ಶಾಲೆಗಳ ಸಭೆ, ಸಮಾರಂಭಕ್ಕೆ ಸ್ಥಳ, ಮಕ್ಕಳ ಬಿಡುವಿನ ವೇಳೆಯಲ್ಲಿ ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆ ನಡೆಸಲು ಸ್ಥಳ, ಹೆಚ್ಚುವರಿ ಶಾಲಾ ಕೊಠಡಿಯಾಗಿಯೂ ಬಳಸಿಕೊಳ್ಳಲಾಗುತ್ತಿದೆ.
ನರೇಗಾದಡಿ ಭೋಜನಾಲಯ ನಿರ್ಮಿಸಿದ್ದರಿಂದ ಸರ್ಕಾರಿ ಶಾಲೆಗಳ ಚಿತ್ರಣವೇ ಬದಲಾಗಿದೆ. ದೀರ್ಘಕಾಲ ಬಾಳಿಕೆ ಬರುವಂತೆ ಸುಸಜ್ಜಿತ ಭೋಜನಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಈ ಮೂಲಕ ನಿಗದಿತ ಗುರಿ ತಲುಪಲು ಇಡೀ ತಂಡ ಕಾರ್ಯೋನ್ಮುಖವಾಗಿದೆ ಎಂದು ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ಪಿ. ಲಕ್ಷ್ಮೀನಾರಾಯಣ, ತಾಂತ್ರಿಕ ಸಂಯೋಜಕ ಅರ್ಷದ ನೇರ್ಲಿ ತಿಳಿಸಿದ್ದಾರೆ.
.
ಹುಕ್ಕೇರಿ ತಾಲೂಕಲ್ಲಿ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಸುಸಜ್ಜಿತ ಭೋಜನಾಲಯ ನಿರ್ಮಿಸಿ ಸೂಕ್ತ ನೆರಳು, ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಬಿಸಿಯೂಟ ಸವಿಯುಲು ಅನುಕೂಲವಾಗಿದೆ. ಬರುವ ದಿನಗಳಲ್ಲಿ ಈ ಕಾರ್ಯವನ್ನು ಮತ್ತಷ್ಟು ವಿಸ್ತಾರಗೊಳಿಸಲಾಗುವುದು.
*ಉಮೇಶ ಸಿದ್ನಾಳ, ಇಒ ತಾಪಂ
ಭೋಜನಾಲಯಗಳಿಂದ ಶೈಕ್ಷಣಿಕ ಗುಣಮಟ್ಟ ವೃದ್ಧಿಯಾಗಿ ಕಲಿಕೆಯಲ್ಲಿ ಪ್ರಗತಿ ಕಾಣಲಿದೆ. ಮಕ್ಕಳ ಹಾಜರಾತಿ ಮತ್ತು ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಲಿದೆ. ಭೋಜನಾಲಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ.
ಸವಿತಾ ಹಲಕಿ, ಬಿಸಿಯೂಟ ಸಹಾಯಕ ನಿರ್ದೇಶಕಿ
ವರದಿ: – ರವಿ ಕಾಂಬಳೆ