ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಪ್ರಚಾರ ಕೈಗೊಳ್ಳಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ

ಬೆಳಗಾವಿ, ಆ.09 : ಅಲ್ಪಸಂಖ್ಯಾತರ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಗೊಳ್ಳಬೇಕು. ನಿಗದಿತ ಅವಧಿಯೊಳಗೆ ಇಲಾಖೆಗಳಿಗೆ ನೀಡಿರುವ ಗುರಿಗಳ ಪ್ರಗತಿ ಸಾಧಿಸಬೇಕು. ಯೋಜನೆಗಳ ಕುರಿತು ಸಾಮಾಜಿಕ ಜಾಲತಾಣ ವಾಟ್ಸಪ್, ಫೇಸ್ ಬುಕ್ ಮೂಲಕ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಆ.09) ನಡೆದ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗಾಗಲೇ ನಿಗದಿತ ಅವಧಿಯೊಳಗೆ ಗುರಿ ಸಾಧಿಸಿದೆ. ಮೀನುಗಾರಿಕೆ ಇಲಾಖೆಯಿಂದ ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆಗಳು ದೊರಬೇಕಿದ್ದು, ಹೆಚ್ಚಿನ ಫಲಾನುಭವಿಗಳ ಆಯ್ಕೆ ಮೂಲಕ ಕೂಡಲೇ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ರೇಷ್ಮೆ ಇಲಾಖೆಯಿಂದ ನೀಡಲಾಗುವ ವಿವಿಧ ಯೋಜನೆಗಳಿಗೆ ಶೇಕಡಾ 70% ಸಬ್ಸಿಡಿ ಇದೆ ಆದರೆ ಪ್ರಗತಿ ವರದಿ ಪ್ರಕಾರ ಕೇವಲ 20% ಫಲಾನುಭವಿಗಳ ಮಾತ್ರ ಸೌಲಭ್ಯ ಪಡೆದುಕೊಳ್ಳುತಿದ್ದಾರೆ ಹಾಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕಳೆದ ವರ್ಷ ಶೇಕಡಾ 60% ವಿವಿಧ ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಸಕ್ತ ವರ್ಷದ ಯೋಜನೆಗಳ ಅನುಷ್ಠಾನಕ್ಕೆ ಏಪ್ರಿಲ್ ನಲ್ಲಿ ವರ್ಕ್ ಆರ್ಡರ್ ಪ್ರಾರಂಭವಾಗಿವೆ. ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಂಬಂಧಿತ ಅಧಿಕಾರಿಗಳು ವಿವರಿಸಿದರು.
ಉದ್ಯೋಗ ವಿನಿಮಯ ಕೇಂದ್ರದಿಂದ ಆಯೋಜಿಸಲಾಗುವ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳಿಂದ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿಯಲ್ಲಿ ಶಿಕ್ಷಣ ಇಲಾಖೆಯಿಂದ ಪಠ್ಯ ಪುಸ್ತಕ ವಿತರಣೆ ಶೇಕಡ 90% ಹಾಗೂ ಸಮವಸ್ತ್ರ 100% ವಿತರಿಸಿ ಗುರಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ತೋರಬಾರದು. ವಾಟ್ಸ್ ಆ್ಯಪ್ ಸೋಸಿಲ್ ಮೀಡಿಯಾ ಪ್ರಚಾರಗಳ ಮೂಲಕ ಯೋಜನೆಗಳ ಅನುಷ್ಠಾನವಾಗಬೇಕು.
ಈಗಾಗಲೇ ಪೊಲೀಸ್ ಇಲಾಖೆಯಿಂದ ವಾಟ್ಸಪ್ ಗ್ರೂಪ್ ಗಳ ಮೂಲಕ ಜಾಗೃತಿ ಸಂದೇಶಗಳು ಪ್ರತಿ ಗ್ರಾಮಗಳಿಗೂ ತಲುಪುವಂತೆ ರವಾನಿಸಲಾಗುತ್ತಿದೆ. ಅದೇ ರೀತಿಯಲ್ಲಿ ವಾಟ್ಸಪ್ ಮೂಲಕ ಯೋಜನೆಗಳ ಮಾಹಿತಿ ಎಲ್ಲರಿಗೂ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಮಹಾನಗರ ಪಾಲಿಕೆ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕರಾದ ಗಂಗಾಧರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಅಬ್ದುಲ್ ರಶೀದ್ ಮಿರ್ಜನ್ನವರ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ರಾಜೀವ ಕೂಲೇರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.