Belagavi News In Kannada | News Belgaum

ಬೆಳಗಾವಿಯಲ್ಲಿ ‘ಕೈ’ ಶಕ್ತಿಗೆ ಬಾಡಿದ ‘ಕಮಲ’

ಬೆಳಗಾವಿ: ಬೆಳಗಾವಿ ಜಿಲ್ಲೆ ಎಂಬ ಭದ್ರಕೋಟೆಯನ್ನು ಮತ್ತೆ ಕೈವಶ ಮಾಡಿಕೊಳ್ಳುವ ಯತ್ನದಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದ್ದು, ಕೈ ಅಬ್ಬರದಿಂದ  ಜಿಲ್ಲೆಯಲ್ಲಿ ಸದ್ಯ ಬಿಜೆಪಿಯ ಬೇರುಗಳೂ ಸಡಿಲಗೊಳ್ಳುತ್ತಿವೆ.’

ಹೌದು… ಬೆಳಗಾವಿ ಜಿಲ್ಲೆಯ  ಬಿಜೆಪಿಯಲ್ಲಿಯೂ ನಾಲ್ಕೈದು ಬಣಗಳಿಂದಾಗಿ ಬಿಜೆಪಿ ‘ಭಣ-ಭಣ’ ಎನ್ನುವಂತಾಗಿದ್ದು, 18 ಸ್ಥಾನಗಳ ಪೈಕಿ ಬರೀ 7 ಸಾನ ಗೆದ್ದು ಸೋತು ಸುಣ್ಣವಾಗಿದೆ. ಸದ್ಯ ಲೋಕಸಭಾ ಚುನಾವಣೆಗೆ 8 ತಿಂಗಳು ಬಾಕಿಯಿರುವುದರಿಂದ ಸೋತ ‘ಕಮಲ’ದ ಪಾರ್ಟಿಗೆ ಶಕ್ತಿ ನೀಡುವರು ಯಾರು? ಎಂಬ ಚಿಂತೆ ಹೈಕಮಾಂಡ್ ನಾಯಕರನ್ನು ಕಾಡುತ್ತಿದೆ..

ಕುಂಟುತ್ತ ಸಾಗಿದ ಕಮಲ: ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಿಸಿ, ರೋಡ್ ಶೋ ಪ್ರಚಾರ ಸಭೆಗಳನ್ನು ನಡೆಸದರೂ ಸಹ  ರಾಯಬಾಗ ತಾಲೂಕಿನ ಕುಡಚಿ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಸೋತಿದೆ. ಪ್ರಬಲ ಲಿಂಗಾಯತ ನಾಯಕರಾಗಿದ್ದ ದಿ.ಉಮೇಶ ಕತ್ತಿ, ಸುರೇಶ ಅಂಗಡಿ, ಆನಂದ ಮಾಮಣಿ ನಿಧನರಾದ ಬಳಿಕ ಪಕ್ಷವೂ ನಿಧಾನಗತಿಯಲ್ಲಿ ಕುಂಟುತ್ತ ಸಾಗಿದೆ..

ಎಡವಟ್ಟು ಮಾಡಿಕೊಂಡ ಬಿಜೆಪಿ: ಸೋತು ಹೋಗಿದ್ದ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ‘ಕಮಲ’ ಅರಳಲಿಲ್ಲ ಎಂಬ ತಿರ್ಮಾನಕ್ಕೆ ಬಂದಿದ್ದ ಬಿಜೆಪಿ ಹೈಕಮಾಂಡ್ ಸವದಿ ಅವರಿಗೂ ಕೊನೆ ಘಳಿಗೆಯಲ್ಲಿ ಟಿಕೆಟ್ ತಪ್ಪಿಸಿ, ಮತ್ತೊಂದು ಎಡವಟ್ಟು ಮಾಡಿಕೊಂಡಿತು. ಲಿಂಗಾಯತ ಸಮುದಾಯದ ಮುಖಂಡರಿಗೆ ಅನ್ಯಾಯ, ಪಂಚಮಸಾಲಿ ಸಮುದಾಯದ ತೀವ್ರ ಹೋರಾಟ ನಡೆದಾಗ, ಸಕಾಲಕ್ಕೆ ಬಿಜೆಪಿ ರಾಜ್ಯ ನಾಯಕರಿಂದ ಸ್ಪಂದನೆ ದೊರೆಯದ ಕಾರಣ, ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬಿಜೆಪಿ ಭದ್ರಕೋಟೆ ಕುಸಿದು ಬಿದ್ದಿತು. ಬಿಜೆಪಿಯಲ್ಲಿ ಲಿಂಗಾಯತ, ಕುರುಬ ಹಾಗೂ ತಳಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂಬ ಧೋರಣೆಯಿಂದಾಗಿ, ಮತದಾರರು ‘ಕೈ’ಗೆ ಒಲವು ತೋರಿಸಿದ್ದರಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ..

 

 

ಮಾಸ್ಟರ್‌ ಮೈಂಡ್‌  ಸತೀಶ್ ಜಾರಕಿಹೊಳಿ: ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳು ಜನಜನಿತ. ಅತ್ಯಂತ ಸರಳ ಸಜ್ಜನ ರಾಜಕಾರಣಿಯಾಗಿ ಸತೀಶ ಜಾರಕಿಹೊಳಿ ಅವರು ದಿನೇ ದಿನೇ ರಾಜ್ಯ ರಾಜಕಾರಣದಲ್ಲಿ ಮೇಲಕ್ಕೆ ಏರುತ್ತಿರುವುದು ವಿಶೇಷವಾಗಿದೆ. ಈ ಬಾರಿಯ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ತಾವೊಬ್ಬ ಮಾಸ್ಟರ್ ಮೈಂಡ್ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಕಳೆದ ಬಾರಿ ಅತ್ಯಂತ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಅದನ್ನೇ ಸವಾಲಾಗಿರಿಸಿಕೊಂಡ ಅವರು ಈ ಬಾರಿ 57211 ಮತಗಳ ಬಹುದೊಡ್ಡ ಅಂತರದಿಂದ ಗೆಲುವಿನ ಗೆರೆ ದಾಟುವ ಮೂಲಕ ಎದುರಾಳಿಗಳ ಎದೆ ನಡುಗಿಸಲು ಕಾರಣರಾಗಿದ್ದಾರೆ..

 


ಅಧಿಕ ಸ್ಥಾನ ಪಡೆಯುವಲ್ಲಿ ಸಾಹುಕಾರ್‌ ರೂವಾರಿ: ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾಲಿಗೆ ಸತೀಶ ಜಾರಕಿಹೊಳಿ ಬಹುದೊಡ್ಡ ನಾಯಕರಾಗಿ ಹೊರಹೊಮ್ಮಿರುವುದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸಾಬೀತಾಗಿದೆ. ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದ್ದ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕ ಸ್ಥಾನ ಪಡೆಯುವಂತಾಗಿದೆ. ಇದರ ಹಿಂದಿನ ರೂವಾರಿಯೇ ಸತೀಶ ಜಾರಕಿಹೊಳಿಯವರಾಗಿದ್ದಾರೆ. ಅವರ ಅಮೋಘ ಕಾರ್ಯತಂತ್ರದ ಫಲವಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ 11 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಕೇವಲ ಏಳು ಸ್ಥಾನಗಳಿಗೆ ಮಾತ್ರ ತೃಪ್ತಿ ಕಂಡಿದೆ..

ಸತೀಶ ಜಾರಕಿಹೊಳಿ ಅವರ ಪರಿಶ್ರಮದಿಂದ ಬೆಳಗಾವಿ ಉತ್ತರ, ಗ್ರಾಮೀಣ, ಸವದತ್ತಿ, ಚಿಕ್ಕೋಡಿ, ಅಥಣಿ, ಕುಡಚಿ, ಕಿತ್ತೂರು, ಬೈಲಹೊಂಗಲ,ರಾಮದುರ್ಗ,ಕಾಗವಾಡ,  ಅಥಣಿ ಮುಂತಾದ ಕ್ಷೇತ್ರಗಳು ಈ ಬಾರಿ ಕಾಂಗ್ರೆಸ್ ಬಗಲಿಗೆ ಮತ್ತೆ ಸೇರ್ಪಡೆಗೊಂಡಿವೆ. ಈ ಮೂಲಕ ಸತೀಶ ಜಾರಕಿಹೊಳಿ ಅವರು ತಮ್ಮ ಮಾಸ್ಟರ್ ಮೈಂಡ್ ರಾಜಕಾರಣದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಗತ ವೈಭವವನ್ನು ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ತಂದುಕೊಟ್ಟ ಹಿರಿಮೆಗೆ ಪಾತ್ರರಾಗಿದ್ದಾರೆ..

ಬಾಡಿದ ಕಮಲಿಗೆ ನೀರು ಸಿಂಪರಿಸುವರ‍್ಯಾರು: ಸದ್ಯ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಬೇರು ಮಟ್ಟದಲ್ಲಿ ಪುನ: ಭಾರತೀಯ ಜನತಾ ಪಕ್ಷವನ್ನು ಬಲಿಷ್ಠಗೊಳಿಸದಿದ್ದರೇ, ಎರಡೂ ಲೋಕಸಭಾ ಸ್ಥಾನಗಳು ಕಾಂಗ್ರೆಸ್ ಪಡೆಯ ತೆಕ್ಕೆಗೆ ಬೀಳಲಿವೆ ಎಂಬ ಮಾತುಗಳು ಎಲ್ಲಡೆ ಹರಿಡಾಡುತ್ತಿವೆ. ದೊಡ್ಡ ದೊಡ್ಡ ಬಿಜೆಪಿ ನಾಯಕರನ್ನು ಜಿಲ್ಲೆಗೆ ಕರೆಸಿದರೂ ಪ್ರಯೋಜನವಾಗದ ಬಿಜೆಪಿಗೆ ಸದ್ಯ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಪುಟಿದೇಳುವಂತೆ ಮಾಡುವದಾದರೂ ಹೇಗೆ ಎಂಬ ಚಿಂತೆ  ಬಿಜೆಪಿ ನಾಯಕರಲ್ಲಿ ಕಾಡಲಾರಂಭಿಸಿದೆ. ಒಟ್ಟಾರೆಯಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೈ  ಶಕ್ತಿಯಿಂದ ಬಿಜೆಪಿ ಬಾಡಿದ್ದು, ಬಾಡಿದ ಕಮಲಿಗೆ ನೀರು ಸಿಂಪರಿಸುವರ‍್ಯಾರು ಎಂಬ ಮಾತುಗಳು ಎಲ್ಲಡೆ ಕೇಳಿ ಬರುತ್ತಿವೆ..