ಉತ್ಸಾಹ ಕಳೆದುಕೊಂಡಿದ್ದೇನೆ: ಜಿಮ್ನಾಸ್ಟ್ ಸ್ಪರ್ಧಿ ದೀಪಾ ಕರ್ಮಾಕರ್

ನವದೆಹಲಿ : ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ತಂಡದಲ್ಲಿ ತಮಗೆ ಸ್ಥಾನ ನೀಡದ್ದಕ್ಕೆ, ಜಿಮ್ನಾಸ್ಟ್ ಸ್ಪರ್ಧಿ ದೀಪಾ ಕರ್ಮಾಕರ್ ಅವರು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮತ್ತು ಕ್ರೀಡಾ ಸಚಿವಾಲಯದ ವಿರುದ್ಧ ಹರಿಹಾಯ್ದಿದ್ದಾರೆ.
2016ರ ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದೀಪಾ, ಏಷ್ಯನ್ ಗೇಮ್ಸ್‌ಗೆ ತಂಡದ ಆಯ್ಕೆಗೆ ಈಚೆಗೆ ನಡೆದಿದ್ದ ಟ್ರಯಲ್ಸ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದರು.
ಆದರೆ ಕಳೆದ 12 ತಿಂಗಳ ಅವಧಿಯಲ್ಲಿ ಏಷ್ಯಾದ ಸ್ಪರ್ಧಿಗಳಲ್ಲಿ ಅಗ್ರ ಎಂಟರೊಳಗೆ ಸ್ಥಾನ ಪಡೆದಿರಬೇಕು ಎಂಬ ಮಾನದಂಡವನ್ನು ಪೂರೈಸದ ಕಾರಣ ಅವರನ್ನು ಏಷ್ಯನ್ ಗೇಮ್ಸ್‌ಗೆ ಪರಿಗಣಿಸಿಲ್ಲ.
‘ಸ್ವಾತಂತ್ರ್ಯ ದಿನದಂದು, ನಾನು ನನ್ನ ವಾಕ್ ಸ್ವಾತಂತ್ರ್ಯ ಬಳಸಿಕೊಂಡು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತೇನೆ. ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವುದನ್ನು ಕಳೆದ ಎರಡು ವರ್ಷಗಳಿಂದ ಎದುರು ನೋಡುತ್ತಿದ್ದೆ. ಆದರೆ ಅವಕಾಶ ಸಿಗದಿರುವುದು ನನ್ನನ್ನು ದುರ್ಬಲ ಮತ್ತು ನಿರುತ್ಸಾಹಗೊಳಿಸಿದೆ’ ಎಂದು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮಂಗಳವಾರ ಬರೆದುಕೊಂಡಿದ್ದಾರೆ.
‘ಪ್ರಮುಖ ಕೂಟಕ್ಕಾಗಿ ನಾವು ಮಾಡುವ ಕಠಿಣ ಪರಿಶ್ರಮ ಮತ್ತು ತ್ಯಾಗವನ್ನು ಯಾರೂ ಗಮನಿಸದಿರುವುದು ನೋವಿನ ವಿಚಾರ. ಎಲ್ಲ ಕ್ರೀಡೆಗಳಲ್ಲಿ ಆಯ್ಕೆಯ ಮಾನದಂಡಗಳು ಪಾರದರ್ಶಕವಾಗಿರಬೇಕು’ ಎಂದು ಆಗ್ರಹಿಸಿದ್ದಾರೆ.
‘ಟ್ರಯಲ್ಸ್‌ನಲ್ಲಿ ಗೆದ್ದು ಆಯ್ಕೆಯ ಮಾನದಂಡಗಳನ್ನು ಪೂರೈಸಿದ್ದರೂ ನನಗೆ ಅವಕಾಶ ನೀಡದಿರುವುದು ಅಚ್ಚರಿ ಮೂಡಿಸಿದೆ. ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ದೊರೆತ ಅವಕಾಶವನ್ನು ನನ್ನಿಂದ ಕಸಿದುಕೊಳ್ಳಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ./////