Belagavi News In Kannada | News Belgaum

ವಿಧಾನ ಪರಿಷತ್​ಗೆ ನಾಮ ನಿರ್ದೇಶನ; ಕಾಂಗ್ರೆಸ್‌ನಿಂದ ಉಮಾಶ್ರೀ ಸೇರಿ ಮೂವರ ಹೆಸರು ಅಂತಿಮ

ಬೆಂಗಳೂರು: ಕಾಂಗ್ರೆಸ್ ಪಕ್ಷದೊಳಗಿನ ಕೆಲವು ನಾಯಕರ ವಿರೋಧದ ನಡುವೆಯೂ ಉಮಾಶ್ರೀ, ಎಂ.ಆರ್‌. ಸೀತಾರಾಮ್, ಸುಧಾಮ್ ದಾಸ್ ಅವರ ಹೆಸರನ್ನು ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಮೂವರ ಹೆಸರನ್ನು ಅಂತಿಮಗೊಳಿಸಿ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ.
ಕಲಾವಿದರ ಕೋಟಾದಡಿ ಮಾಜಿ ಸಚಿವೆ, ನಟಿ ಉಮಾಶ್ರೀ ಅವರಿಗೆ ಸ್ಥಾನ ನೀಡಿದ್ದು, ಶಿಕ್ಷಣ ಕ್ಷೇತ್ರದ ಕೋಟಾದಡಿ ಎಂ.ಆರ್‌.ಸೀತಾರಾಮ್‌ ಹಾಗೂ ಸಮಾಜ ಸೇವೆ ಕ್ಷೇತ್ರದಿಂದ ಸುಧಾಮ್‌ ದಾಸ್‌ ಅವರ ಹೆಸರು ಅಂತಿಮಗೊಳಿಸಲಾಗಿದೆ. ಕಾಂಗ್ರೆಸ್‌ ನಾಯಕ ಮನ್ಸೂರ್‌ ಅಲಿಖಾನ್‌ ಅವರ ಹೆಸರನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ.
ಎಂ.ಆರ್‌.ಸೀತಾರಾಮ್‌ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರ ಬಗ್ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಲ್ಹೋಟ್‌ ಅವರು ಹೆಚ್ಚಿನ ಮಾಹಿತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಸೀತಾರಾಮ್ ಮತ್ತು ಸುಧಾಮ್ ದಾಸ್ ಆಯ್ಕೆಗೆ ಕಾಂಗ್ರೆಸ್‌ನಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಆಕಾಂಕ್ಷಿಗಳನ್ನು ಸಂಪರ್ಕಿಸಿ ಸಮಾಧಾನ ಪಡಿಸಲು ನಾಯಕರು ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ, ಸೀತಾರಾಮ್, ಸುಧಾಮ್ ದಾಸ್​​ ನಾಮನಿರ್ದೇಶನ ವಿರೋಧಿಸಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಹೀಗಾಗಿ ರಾಜ್ಯಪಾಲರು ಸರ್ಕಾರದಿಂದ ಸ್ಪಷ್ಟನೆ ಕೋರಿದ್ದಾರೆ./////