Belagavi News In Kannada | News Belgaum

ಬೆಳಗಾವಿ ಜಿಲ್ಲೆಯಲ್ಲಿ ಎರಡು ಎಂಪಿ ಸ್ಥಾನ ಗೆಲ್ಲುತ್ತೇವೆ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: “ಲೋಕಸಭಾ ಚುನಾವಣೆಗೆ ಇನ್ನು ತುಂಬಾ ಸಮಯವಿದೆ. ಯಾರು ಸ್ಪರ್ಧೆ ಮಾಡಬೇಕೆಂಬುದು ಇನ್ನೂ ಅಂತಿಮವಾಗಿಲ್ಲ. ಪಕ್ಷ ಯಾರನ್ನು ಗುರುತಿಸುತ್ತದೋ ಅವರು ಸ್ಪರ್ಧೆ ಮಾಡುತ್ತಾರೆ. ನಾವು ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಸ್ಥಾನವನ್ನು ಗೆಲ್ಲುತ್ತೇವೆ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುನ್ನೂರು ಪ್ರವಾಸ ಮಂದಿರದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷದ ಬಳಿಕ ಹಿರಿಯ ಸಚಿವರು ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ನಾನು ಈಗಾಗಲೇ ಸಾಕಷ್ಟು ಸಾರಿ ಹೇಳಿದ್ದೇನೆ. ನಮ್ಮ ಹಂತದಲ್ಲಿ ಚರ್ಚೆ ಆಗಿಲ್ಲ, ದೆಹಲಿ ಲೆವಲ್‌ನಲ್ಲಿ ಚರ್ಚೆ ಆಗಿರಬಹುದು, ಆಗದೇ ಇರಬಹುದು. ಅದರ ಬಗ್ಗೆ ಸ್ಪಷ್ಟೀಕರಣ ಕೊಡಲು ಆಗಲ್ಲ, ನಿರ್ಧಾರ ತೆಗೆದುಕೊಳ್ಳೋ ಹಂತದಲ್ಲಿ ನಾವಿಲ್ಲ, ನಿರ್ಧಾರ ತಗೆದುಕೊಳ್ಳೋರು ಬೇರೆ. ನಿರ್ಧಾರ ತಗೆದುಕೊಳ್ಳೋರು ದೆಹಲಿಯಲ್ಲಿ ಇದ್ದಾರೆ, ಹೈಕಮಾಂಡ್ ಅಂತಿಮವಾಗಿ ತೀರ್ಮಾನ ಮಾಡುತ್ತೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ” ಎಂದು ಹೇಳಿದರು.
ಕೆಲವು ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ವಿಚಾರವಾಗಿ ಮಾತನಾಡಿ, “ಈ ಬಗ್ಗೆ ಚರ್ಚೆ ಆಗುತ್ತಿದೆ, ನಿರ್ಧಾರ ಆಗಿಲ್ಲ. ಬೆಳಗಾವಿ ಜಿಲ್ಲೆಯ ಎರಡೂ ಸ್ಥಾನ ಗೆಲ್ಲಬೇಕೆಂಬ ಆಸೆ ಇದೆ. ಇದಕ್ಕಾಗಿ ಅಭ್ಯರ್ಥಿಗಳನ್ನು ಹುಡುಕುತ್ತಿದ್ದೇವೆ, ಅಂತಿಮವಾಗಿ ಹೈಕಮಾಂಡ್​ ತೀರ್ಮಾನ ಮಾಡುತ್ತದೆ. ಅಲ್ಲಿಯವರೆಗೂ ಕಾದು ನೋಡೋಣ” ಎಂದು ಸಚಿವ ಜಾರಕಿಹೊಳಿ ತಿಳಿಸಿದರು./////