ಪಿಎಂಎವೈ ವಸತಿ ರಹಿತ ಬಡವರಿಗೆ ಆಸರೆ

ಹುಕ್ಕೇರಿ : ಸ್ವಂತ ಸೂರು ಹೊಂದಬೇಕೆAಬ ಬಯಕೆ ಹೊಂದಿದ ಗ್ರಾಮೀಣ ಬಡಜನರ ಕನಸು ನನಸಾಗುವ ಕಾಲ ಇದೀಗ ಕೂಡಿ ಬಂದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಯಡಿ ಇದೀಗ ಹುಕ್ಕೇರಿ ತಾಲೂಕಿಗೆ ೭೨೯ ಮನೆಗಳಿಗೆ ಅನುಮೋದನೆ ದೊರೆತಿದೆ. ತನ್ಮೂಲಕ ಪಿಎಂಎವೈ ವಸತಿ ರಹಿತ ಬಡವರ ಬಾಳಿಗೆ ‘ಆಸರೆ’ಯಾಗುವ ಕಾಲ ಸನ್ನಿಹಿತವಾಗಿದೆ.
ಎಲ್ಲರಿಗೂ ವಸತಿ ಉದ್ದೇಶ ಸಾಧಿಸುವ ಗುರಿ ಹೊಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ)ಯಲ್ಲಿ ೨೦೨೧-೨೨ನೇ ಸಾಲಿನ ಈ ೭೨೯ ಹೊಸ ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ತನ್ಮೂಲಕ ಕಳೆದ ನಾಲ್ಕು ವರ್ಷಗಳಿಂದ ಹೊಸ ಮನೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ತಾಲೂಕಿನ ೫೨ ಗ್ರಾಮ ಪಂಚಾಯಿತಿಗಳಿಗೆ ಮನೆ ಭಾಗ್ಯ ಕರುಣಿಸಿದೆ.
ಈ ಮೊದಲು ಇಂದಿರಾ ಆವಾಸ್ ಯೋಜನೆ ಎಂದು ಕರೆಯಲ್ಪಡುತ್ತಿದ್ದ ಈ ಯೋಜನೆಯನ್ನು ೨೦೧೬ರಲ್ಲಿ ಪಿಎಂಎವೈ ಮರುಹೆಸರಿಸಲಾಗಿದೆ. ಈಗ ತ್ವರಿತಗತಿಯಲ್ಲಿ ಉದ್ದೇಶಿತ ಗುರಿ ತಲುಪಲು ಮತ್ತು ಫಲಾನುಭವಿಗಳಿಗೆ ಅನುಕೂಲವಾಗುವ ದಿಸೆಯಲ್ಲಿ ಕೆಲ ಮಾರ್ಪಾಡು ಮಾಡಿ ಈ ಯೋಜನೆ ಸರಳೀಕರಣಗೊಳಿಸಲಾಗಿದೆ.
ಫಲಾನುಭವಿಗಳಿಗೆ ಮೊದಲ ಕಂತಿನ ಮುಂಗಡ ಅನುದಾನ ಬಿಡುಗಡೆ ಭಾಗ್ಯ ಕರುಣಿಸಲಾಗಿದೆ. ಸರ್ಕಾರದ ಈ ಮಹತ್ವದ ಹೆಜ್ಜೆ ಫಲಾನುಭವಿಗಳ ಮೊಗದಲ್ಲಿ ಸಹಜವಾಗಿ ಮಂದಹಾಸ ಮೂಡಿಸಿದೆ. ಅರ್ಹರಿಗೆ ವಸತಿ ಒದಗಿಸುವ ಬದ್ಧತೆಯಿಂದ ಸರ್ಕಾರ ಈ ಸಕಾರಾತ್ಮಕ ಬೆಳವಣಿಗೆಗೆ ಮುಂದಡಿ ಇಟ್ಟಿದೆ.
ಈಗಾಗಲೇ ಸಾಮಾನ್ಯ, ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ೩೦.೦೦೦ ಸಾವಿರ, ಎಸ್ಸಿಎಸ್ಟಿ ಫಲಾನುಭವಿಗಳಿಗೆ ೪೭.೭೫೦ ಸಾವಿರ ರೂ,ಗಳ ಅನುದಾನ ಬಿಡುಗಡೆಯಾಗಿದೆ. ಈ ಮುಂಗಡ ಅನುದಾನ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳದೇ ಉದ್ದೇಶಿತ ಮನೆ ನಿರ್ಮಾಣ ಕಾರ್ಯ ಆರಂಭಿಸುವಂತೆ ೧ ತಿಂಗಳ ಗಡುವು ವಿಧಿಸಲಾಗಿದೆ. ತಪ್ಪಿದಲ್ಲಿ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಮುಂಗಡ ಅನುದಾನ ಬಿಡುಗಡೆ ಕ್ರಮದಿಂದ ಭೌತಿಕವಾಗಿ ಮನೆಗಳ ನಿರ್ಮಾಣಕ್ಕೆ ಮತ್ತಷ್ಟು ವೇಗ ಸಿಗಲಿದೆ. ಆರ್ಥಿಕವಾಗಿ ಬಡ ಫಲಾನುಭವಿಗಳಿಗೆ ನೆರವಾಗಲಿದೆ. ಜತೆಗೆ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಈ ವಸತಿ ಯೋಜನೆ ಕೈಗೆಟಕಲಿದೆ. ಈ ಮೂಲಕ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕೆ ಬೂಸ್ಟರ್ ಸಿಕ್ಕಂತಾಗಿದೆ.
೨೦೧೮ರ ವಸತಿ ರಹಿತರ ಸಮೀಕ್ಷೆಯಂತೆ ವರ್ಗವಾರು ಎಸ್ಸಿಎಸ್ಟಿ, ಧಾರ್ಮಿಕ ಅಲ್ಪಸಂಖ್ಯಾತರು, ಸಾಮಾನ್ಯ ಆದ್ಯತಾ ಪಟ್ಟಿಯಲ್ಲಿ ಇರುವ ಅರ್ಹರನ್ನು ಫಲಾನುಭವಿಗಳನ್ನಾಗಿ ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಸಾಮಾನ್ಯ, ಅಲ್ಪಸಂಖ್ಯಾತರಿಗೆ ೧.೨೦ ಲಕ್ಷ ರೂ ಹಾಗೂ ಎಸ್ಸಿಎಸ್ಟಿಗಳಿಗೆ ೧.೭೫ ಲಕ್ಷ ರೂ ಘಟಕ ವೆಚ್ಚದಡಿ ಸಹಾಯಧನ ಲಭಿಸಲಿದೆ.
ಪಿಎಂಎವೈ ವಸತಿ ಯೋಜನೆಯಡಿ ಹುಕ್ಕೇರಿ ತಾಲೂಕಿಗೆ ೭೨೯ ಮನೆಗಳು ಮಂಜೂರಾಗಿದ್ದು ಬಡವರು, ವಸತಿರಹಿತರಿಗೆ ವರದಾನವಾಗಿದೆ. ಬಿಡುಗಡೆಯಾದ ಮುಂಗಡ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬಾರದು.-
ಡಾ.ರವಿಕುಮಾರ ಹುಕ್ಕೇರಿ, ಇಒ ತಾಪಂ