Belagavi News In Kannada | News Belgaum

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: 7 ಮಂದಿ ಅರೆಸ್ಟ್

ಹೈದರಾಬಾದ್: 16 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಹೈದರಾಬಾದ್‌ನ ನಂದನವನಂ ಕಾಲೋನಿಯಲ್ಲಿ ಘಟನೆ ನಡೆದಿದ್ದು, ರಾಚಕೊಂಡ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಅಬೇದ್ ಬಿನ್ ಖಲೀದ್, ತಹಸೀನ್, ಮಂಕಾಳ ಮಹೇಶ್, ಎಂ ನರಸಿಂಗ್, ಅಶ್ರಫ್, ಫೈಝಲ್ ಮತ್ತು ಇಮ್ರಾನ್ ಎಂದು ಗುರುತಿಸಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ತಡೆ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ.
ಭಾನುವಾರ ಬೆಳಗ್ಗೆ ಬಾಲಕಿಯ ಮನೆಗೆ ನುಗ್ಗಿದ ಅಬೇದ್ ಮತ್ತು ಆತನ ಸ್ನೇಹಿತರು ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಬಲವಂತವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಘಟನೆಯ ಬಳಿಕ ಸಂತ್ರಸ್ತೆ ಸೋಮವಾರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳು ಮದ್ಯದ ಅಮಲಿನಲ್ಲಿ ಬೆಳಗ್ಗೆ 9:30ರ ಸುಮಾರಿಗೆ ಆಕೆಯ ಮನೆಗೆ ಬಲವಂತವಾಗಿ ನುಗ್ಗಿ ಆಕೆಗೆ ಮತ್ತು ಆಕೆಯ ಸಹೋದರನಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಉಲ್ಲೇಖಿಸಿ ದೂರನ್ನು ನೀಡಿದ್ದಾಳೆ.
ಈ ಕುರಿತು ಕ್ರಮ ಕೈಗೊಂಡಿರುವ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು 11 ವಿಶೇಷ ತಂಡಗಳನ್ನು ರಚಿಸಿ ಪ್ರಮುಖ ಆರೋಪಿ ಅಬೇದ್‌ನನ್ನು ಮಂಗಳವಾರ ಸಂಜೆ 4 ಗಂಟೆಯ ಸುಮಾರಿಗೆ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಬೇದ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಪೊಲೀಸರು ಅವನ ಬಳಿಯಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ಮೂವರು ನೇರ ಅಪರಾಧಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಅಶ್ರಫ್ ಮತ್ತು ನರಸಿಂಗ್ ಘಟನಾ ಸ್ಥಳದಲ್ಲಿ ಹಾಜರಿದ್ದು, ದುಷ್ಕರ್ಮಿಗಳಿಗೆ ಸಹಾಯ ಮಾಡಿದ್ದಾರೆ. ಅಲ್ಲದೇ ಫೈಝಲ್ ಮತ್ತು ಇಮ್ರಾನ್ ಆರೋಪಿಗಳ ಹೇಯ ಕೃತ್ಯದ ಬಗ್ಗೆ ತಿಳಿದಿದ್ದರೂ ಅವರಿಗೆ ಸಹಾಯ ಮಾಡಿದ್ದಾರೆ ಎಂದು ರಾಚಕೊಂಡ ಆಯುಕ್ತ ಡಿಎಸ್ ಚೌಹಾಣ್ ತಿಳಿಸಿದ್ದಾರೆ./////