Belagavi News In Kannada | News Belgaum

ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಹಕರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ

ಬೆಳಗಾವಿ, ಆ.23 : ನಗರ ಸ್ಥಳೀಯ ಸಂಸ್ಥೆಗಳು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಹಕರಿಸಬೇಕು. ವಿವಿಧ ತೆರಿಗೆಗಳ ಬಾಕಿ ವಸೂಲಾತಿ ಹಾಗೂ ಸರ್ವೆಗಳನ್ನು ಪೂರ್ಣಗೊಳಿಸಿ ಸಂಸ್ಥೆಗಳ ವ್ಯಾಪ್ತಿಯ ಒತ್ತುವರಿ ಜಮೀನುಗಳನ್ನು ಕಬ್ಜ ತೆಗೆದುಕೊಳ್ಳಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ (ಆ.23) ನಡೆದ ನಗರ, ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಮಳಿಗೆಗಳ ಲೀಸ್ ಗಳನ್ನು ನವೀಕರಣಕ್ಕೆ ಸೂಚಿಸಬೇಕು. ಲೀಸ್ ನವೀಕರಣ ಕುರಿತು ರಿಜಿಸ್ಟರ್ ನಿರ್ವಹಣೆ ಮಾಡಬೇಕು. ನವೀಕರಣಗೊಳಿಸದೆ ಅನಧಿಕೃತ ಮಳಿಗೆಗಳ ಲೀಸ್ ರದ್ದತಿಗೊಳಿಸಬೇಕು ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್ ಗಳ ಚಾಲನೆಯಲ್ಲಿರಬೇಕು. ಪತ್ರಿಕೆ ಹಾಗೂ ದೃಶ್ಯ ಮಾದ್ಯಮಗಳಲ್ಲಿ ವರದಿಯಾದ ಕಾಮಗಾರಿ ಕುಂಠಿತ ಹಾಗೂ ಇನ್ನಿತರ ಸಾರ್ವಜನಿಕ ತೊಂದರೆಗಳಿಗೆ ಕೂಡಲೇ ಸ್ಪಂದಿಸಬೇಕು. ವರದಿಯ ಕುರಿತು ತಕ್ಷಣ ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೊಸ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳ ಸೇರ್ಪಡೆಗೆ ಕ್ರಮ ವಹಿಸಬೇಕು. ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ನೀರಿನ ಸಂಪರ್ಕ ಕಲ್ಪಿಸಬೇಕು. ಕಸ ವಿಲೇವಾರಿಗೆ ಅಗತ್ಯ ಕ್ರಮ ವಹಿಸಬೇಕು.
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ “ಗೃಹ ಲಕ್ಷ್ಮೀ” ಯೋಜನೆಗೆ ಆಗಸ್ಟ್ 30 ರಂದು ರಾಜ್ಯಾದ್ಯಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯೋಜನೆಗಳ ಅನುಷ್ಟಾನಕ್ಕೆ ಎಲ್ಲರೂ ಕೈ ಜೋಡಿಸಬೇಕು. ಪ್ರತಿ ಫಲಾನುಭವಿಗಳಿಗೆ ಗೃಹ ಲಕ್ಷ್ಮೀ ಯೋಜನೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
 ಖಾಯಂ ನೇಮಕಾತಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ:
ಇದಕ್ಕೂ ಮುಂಚೆ ಜಿಲ್ಲೆಯ 35 ನಗರ ಸ್ಥಳೀಯ ಸಂಸ್ಥೆಗಳ ನೇರಪಾವತಿ ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರು ಹಾಗೂ ಲೋಡರ್ ಮತ್ತು ಕ್ಲೀನರ್ ಹುದ್ದೆಗೆ ವಿಷೇಶ ನೇಮಕಾತಿ ನಿಯಮದಂತೆ ಖಾಯಂಗೊಳಿಸಲು ನೇಮಕಾತಿಗೆ ಅರ್ಹರಿರುವ ಎಲ್ಲ ಪೌರಕಾರ್ಮಿಕರೊಂದಿಗೆ ಜಿಲ್ಲಾ ಆಯ್ಕೆ ಸಮಿತಿ ಸಭೆ ಜರುಗಿಸಲಾಯಿತು.
ಒಟ್ಟು 194 ಪೌರಕಾರ್ಮಿಕರನ್ನು ಹಾಗೂ 8 ಲೌಡರ್ ಗಳನ್ನು ನೇಮಕಾತಿ ಮಾಡಲು ಶೀಘ್ರವೇ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸಬಾರದಂತೆ ಎಲ್ಲ ಪೌರಕಾರ್ಮಿಕರಿಗೆ ಸಭೆಯಲ್ಲಿ ಮನವರಿಕೆ ಮಾಡಲಾಯಿತು.
ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ್,
ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕಲಾದಗಿ, ಮತ್ತಿತರ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.