Belagavi News In Kannada | News Belgaum

ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆದ ಬಂಗಾರದ ಮನುಷ್ಯ ಚೋಪ್ರಾ

ಬೆಂಗಳೂರು: ಹಂಗೇರಿಯ ಬುಡಾಪೆಸ್ಟ್​ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ  ಫೈನಲ್​ಗೆ​ ಪ್ರವೇಶಿಸಿದ್ದಾರೆ. ಫೈನಲ್​ನ ಅರ್ಹತಾ ಸುತ್ತಿನಲ್ಲಿ 88.77 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ನೀರಜ್ ಚೋಪ್ರಾ ಅಂತಿಮ ಸುತ್ತಿಗೆ ಪ್ರವೇಶಿಸಿದರು. ಇದರೊಂದಿಗೆ 2024 ರಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್​ಗೂ ನೇರ ಅರ್ಹತೆ ಪಡೆದುಕೊಂಡರು.

ಟಾರ್ಗೆಟ್​ 83 ಮೀಟರ್: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಫೈನಲ್​ಗೆ ಪ್ರವೇಶಿಸಲು ಕನಿಷ್ಠ 83 ಮೀಟರ್​ ದೂರದವರೆಗೆ ಜಾವೆಲಿನ್ ಎಸೆಯಬೇಕಿತ್ತು. ಇತ್ತ ಮೊದಲ ಎಸೆತದಲ್ಲೇ 88.77 ಮೀಟರ್ ಎಸೆದು ನೀರಜ್ ಚೋಪ್ರಾ ಫೈನಲ್​ಗೆ ಅರ್ಹತೆ ಪಡೆದುಕೊಂಡರು. ಅಲ್ಲದೆ ಇದಾದ ಬಳಿಕ ಉಳಿದ ಯಾವುದೇ ಎಸೆತಗಾರರು ಚೋಪ್ರಾ ಅವರ ದೂರವನ್ನು ಕ್ರಮಿಸಿರಲಿಲ್ಲ. ಹೀಗಾಗಿ ಏಕೈಕ ಎಸೆತದೊಂದಿಗೆ ನೀರಜ್ ಅಗ್ರಸ್ಥಾನ ಅಲಂಕರಿಸಿದರು.

ಒಲಿಂಪಿಕ್ಸ್​ಗೆ ನೇರ ಎಂಟ್ರಿ: ಪ್ಯಾರಿಸ್​ನಲ್ಲಿ ನಡೆಯಲಿರುವ 2024ರ ಒಲಿಂಪಿಕ್ಸ್​ಗಾಗಿ ಜುಲೈ 1 ರಿಂದ ಅರ್ಹತಾ ವಿಂಡೋ ತೆರೆದಿದೆ. ಇಲ್ಲಿ  85.50 ಮೀಟರ್ ಮಾರ್ಕ್​​ ಅನ್ನು ಅರ್ಹತಾ ಮಾನದಂಡವಾಗಿ ನಿಗದಿ ಮಾಡಲಾಗಿದ್ದು, ಇದೀಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ 88.77 ಮೀಟರ್ ದೂರದವರೆಗೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆದುಕೊಂಡಿದ್ದಾರೆ.