Belagavi News In Kannada | News Belgaum

ಬ್ಯಾರಿಕೇಡ್ ಬಂಧಿಗಳಾದ ಬಿಜೆಪಿ ನಾಯಕರು: ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಕಲಬುರಗಿ: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆ ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಲು ಆಗಮಿಸುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಬಂದೋಬಸ್ತ್‌ಗೆಂದು ಹಾಕಲಾಗಿದ್ದ ಬ್ಯಾರಿಕೇಡ್ ಒಳಗಿನಿಂದಲೇ ಮೋದಿ ಗಮನ ಸೆಳೆಯಲು ಪ್ರಯತ್ನಿಸುತ್ತಿರುವ ಸನ್ನಿವೇಶವನ್ನು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಶನಿವಾರ ‘ಟ್ವೀಟ್’ ಮೂಲಕ ಬಿಜೆಪಿ ನಾಯಕರನ್ನು ಬ್ಯಾರಿಕೇಡ್ ಬಂಧಿಗಳು ಎಂದು ಕುಟುಕಿದ ಖರ್ಗೆ, ಪ್ರಧಾನಿ ಮುಂದೆ ಬ್ಯಾರಿಕೇಡ್ ಬಂಧಿಗಳಾಗಿ ಗಮನ ಸೆಳೆಯಲು ಹರಸಾಹಸ ಮಾಡುತ್ತಿರುವ ಬಿಜೆಪಿ ನಾಯಕರು ಸ್ವಾಭಿಮಾನ, ಆತ್ಮಗೌರವವನ್ನು ಬೀದಿಪಾಲು ಮಾಡಿಕೊಂಡಿದ್ದು ಕರುಣಾಜನಕವಾಗಿದೆ ಎಂದು ತಿವಿದಿದ್ದಾರೆ.

ರಾಜಕೀಯವಾಗಿ, ಸೈದ್ಧಾಂತಿಕವಾಗಿ ವಿರೋಧಿಗಳಾಗಿದ್ದರೂ ಕರ್ನಾಟಕ ಬಿಜೆಪಿ ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ. ನೂರು ದಿನಗಳಾದರೂ ಕೂಡಾ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದ ಬಿಜೆಪಿಯನ್ನು ತೀಕ್ಷ್ಣವಾಗಿ ಟೀಕಿಸಿರುವ ಅವರು ಹೈಕಮಾಂಡ್‌ನಿಂದ ಇಷ್ಟೊಂದು ತಿರಸ್ಕಾರಕ್ಕೆ ಒಳಪಟ್ಟಿರುವಾಗ ವಿರೋಧ ಪಕ್ಷದ ನಾಯಕನ ಆಯ್ಕೆ ಸಾಧ್ಯವಾಗುವುದೇ ಎಂದು ಪ್ರಶ್ನಿಸಿ, ಈಗ ಸ್ವತಃ ಬಿಜೆಪಿಗರೂ ಸರ್ವಾಧಿಕಾರದ ಸಂತ್ರಸ್ತರಾಗಿದ್ದಾರೆ ಎಂದು ವಾಗ್ಬಾಣ ಬಿಟ್ಟಿದ್ದಾರೆ.

ಬೀದಿಯಲ್ಲಿ ನಿಂತ ಬಿಜೆಪಿ ನಾಯಕರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದು, ಇದು ಮತ ನೀಡಿದ ಮತದಾರರಿಗೆ ಅವಮಾನ, ಕನ್ನಡಿಗರಿಗೆ ಅವಮಾನ, ಕಾರ್ಯಕರ್ತರಿಗೆ ಅವಮಾನ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ./////