Belagavi News In Kannada | News Belgaum

ಸಚಿವ ತಿಮ್ಮಾಪೂರ, ಸಾಹುಕಾರ ತಳೇವಾಡರ ಫೋಟೋ ವೈರಲ್ ಸಾರ್ವಜನಿಕರಲ್ಲಿ ಅಚ್ಛರಿ ಮೂಡಿಸಿದ ರಾಜಕೀಯ ಬದ್ಧ ವೈರಿಗಳ ಸಮಾಗಮ

ಮುಧೋಳ : ಕಳೆದ 20 ವರ್ಷಗಳಿಂದ ಮುಧೋಳ ಮೀಸಲು ಮತಕ್ಷೇತ್ರದ ರಾಜಕಾರಣದಲ್ಲಿ ಬಿಜೆಪಿಯ ಮಾಜಿ ಸಚಿವರ ಗೆಲುವಿನಲ್ಲಿ ಪ್ರತೀ ಬಾರಿ ಪ್ರಮುಖ ಪಾತ್ರ ವಹಿಸುತ್ತಿದ್ದ, ಹಾಗೂ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಸಂಪೂರ್ಣ ವಿರೋಧಿಗಳಾಗಿದ್ದ ಜಿಲ್ಲೆಯಲ್ಲಿಯೇ ಸಾಹುಕಾರರೆಂದೇ ಪ್ರಖ್ಯಾತರಾಗಿರುವ ರನ್ನ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿರುವ ರಾಮಣ್ಣ ತಳೇವಾಡ ಅವರು ಅಬಕಾರಿ ಹಾಗೂ ಬಾಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಜೊತೆ ತಮ್ಮ ಕುಟುಂಬದೊಂದಿಗೆ ತೆಗೆಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‍ಗೊಂಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಭಾರೀ ಅಚ್ಛರಿ ಮೂಡಿಸಿದ್ದು, ಇದು ಪರ-ವಿರೋಧ ಚರ್ಚೆಗೆ ತುಂಬಾ ಚರ್ಚೆಗೆ ಗ್ರಾಸವಾಗಿ, ರಾಜಕೀಯ ಮುತ್ಸದ್ದಿಗಳಲ್ಲಿ ತೀವ್ರ ತಲ್ಲಣ ಮೂಡಿಸಿದೆ.
ಗ್ರಾಮೀಣ ಭಾಗದಲ್ಲಿ ಕೆಲವು ವರ್ಷಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ದ್ವೇಷ ರಾಜಕಾರಣ ಮೂಡಿತ್ತು. ಯಾವುದೇ ಕಾರ್ಯಕ್ರಮಗಳಿಗೂ ಪರಸ್ಪರ ಆಹ್ವಾನ ನೀಡದೇ ಸಂಬಂಧಿಕರಿದ್ದರೂ ಕರೆಯದಂತಹ ದ್ವೇಷದ ಹಗೆ ಮನೆ ಮಾತಾಗಿತ್ತು. ಇತ್ತೀಚೆಗೆ ನಡೆದ ಚುನಾವಣೆಯ ನಂತರ ಎರಡು ತಿಂಗಳುಗಳಿಂದ ಸಚಿವ ಆರ್.ಬಿ.ತಿಮ್ಮಾಪೂರ ತಾಲೂಕಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಈ ಕುರಿತು ಜನರೊಂದಿಗೆ ಭಾವನಾತ್ಮಕವಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದು, ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ ಹಾಗೂ ಯಾರೂ ಮಿತ್ರರಲ್ಲ. ವೈರತ್ವ ಭಾವನೆಗಳಿಗೆ ತಡೆ ಹಾಕಿ ಯಾರೇ ಕರೆದರೂ ಅವರ ಮನೆಗೆ ಹೋಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ರಾಜಕಾರಣವೇ ಬೇರೆ, ವೈಯಕ್ತಿಕ ಬದುಕೇ ಬೇರೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ತಮ್ಮ ತಮ್ಮ ಪಕ್ಷಗಳ ಸಿದ್ಧಾಂತಗಳ ಮೂಲಕ ಮತ ಯಾಚನೆ ಮಾಡಿ, ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದು ಪ್ರಜಾಪ್ರಭುತ್ವದ ವ್ಯವಸ್ಥೆ. ಆದರೆ ನಮ್ಮ ಗ್ರಾಮೀಣ ಭಾಗದಲ್ಲಿ ಅದನ್ನು ಬಿಟ್ಟು ಸಾಂಪ್ರದಾಯಿಕ ಎದುರಾಳಿಗಳಾಗಿ ದ್ವೇಷ, ಅಸೂಯೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ತೀವ್ರ ನೋವನ್ನುಂಟು ಮಾಡಿದೆ ಎಂದು ನೊಂದು ತಿಳಿಸಿದ್ದಾರೆ. ಅವರು ನಮ್ಮ ವಿರುದ್ಧ ಪಕ್ಷದವರೆಂದರೆ ಅದು ವೈರತ್ವ ಮಾಡುವುದಲ್ಲ. ಆದ್ದರಿಂದ ಇನ್ನು ಮುಂದೆ ಚುನಾವಣಾ ಸಂದರ್ಭಗಳಲ್ಲಿ ಮಾತ್ರ ರಾಜಕಾರಣ ಮಾಡಿ ಅದನ್ನು ಅಲ್ಲಿಗೆ ಮರೆತು ಮುಂದೆ ಎಲ್ಲರೂ ನಮ್ಮವರೇ ಎಂಬ ಭಾವನೆಯೊಂದಿಗೆ ಎಲ್ಲರೂ ಹೊಂದಿಕೊಂಡು ಕೂಡಿಕೊಂಡು ಅಭಿವೃದ್ಧಿಪೂರಕವಾಗಿ ಸಲಹೆ-ಸೂಚನೆ ನೀಡುವುದರೊಂದಿಗೆ ಪರಸ್ಪರ ಸಹೋದರತ್ವ ಭಾವನೆಯೊಂದಿಗೆ ಇರೋಣ ಎಂದು ತಿಳಿ ಹೇಳುತ್ತಿದ್ದಾರೆ.
ಫೋಟೋ ವೈರಲ್ ಬಗ್ಗೆ ಪತ್ರಿಕೆ ಪ್ರಶ್ನಿಸಿದಾಗ ಸಚಿವ ಆರ್.ಬಿ.ತಿಮ್ಮಾಪೂರ ಅವರು ಮಾತನಾಡಿ, ಇತ್ತೀಚೆಗೆ ಸಾಹುಕಾರ ರಾಮಣ್ಣಾ ತಳೇವಾಡ ಅವರು ಮುಧೋಳದಲ್ಲಿ ನೂತನವಾಗಿ ನಿರ್ಮಿಸಿದ ಮನೆಯ ಗೃಹಶಾಂತಿಯ ಸಂದರ್ಭದಲ್ಲಿ ನಾನೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿ ಬರುವಾಗ ಅವರ ಸಹೋದರರ ಪುತ್ರರಾದ ಕಾಂಗ್ರೆಸ್ ಮುಖಂಡ ಸಂಜಯ ತಳೇವಾಡ ಅವರು ಈ ವಿಷಯ ತಿಳಿಸಿದಾಗ ನಾನು ಅವರ ಮನೆಗೆ ತೆರಳಿ ಶುಭ ಕೋರಿದೆ. ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ. ರಾಜಕಾರಣವೇ ಬೇರೆ, ವೈಯಕ್ತಿಕ ಜೀವನವೇ ಬೇರೆ. ಪರಸ್ಪರರಲ್ಲಿ ಪ್ರೀತಿ, ಭಾತೃತ್ವ ಭಾವನೆ ಬೆಳೆಸೋಣ, ದ್ವೇಷ ಭಾವನೆ ಅಳಿಸೋಣ, ಮತ್ತೆ ರಾಜಕೀಯ ಬಂದಾಗ ನಾವು ರಾಜಕಾರಣ ಮಾಡೋಣ. ಇದರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವುದೇ ಗೊಂದಲಕ್ಕೀಡಾಗಿ ಮುನಿಸಿಕೊಳ್ಳುವ ಪ್ರಸಂಗವೇ ಬೇಡ. ನಾನು ಯಾವುದೇ ಸಂದರ್ಭದಲ್ಲಿಯೂ ನಮ್ಮ ಕಾಂಗ್ರೆಸ್ ಪಕ್ಷ, ಮುಖಂಡರು ಹಾಗೂ ಕಾರ್ಯಕರ್ತರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಅವರು ವೈರಲ್ ಫೋಟೋದ ಬಗ್ಗೆ ತೆರೆ ಎಳೆದರು.