Belagavi News In Kannada | News Belgaum

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹುಕ್ಕೇರಿ ತಹಶಿಲ್ದಾರ್ ಕಚೇರಿ ಎದುರು ಸತ್ಯಾಗ್ರಹ

ಹುಕ್ಕೇರಿ : ತಾಲೂಕಿನ ಅವರಗೋಳ ಗ್ರಾಮದ ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿ ಖಚಿತಪಡಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ಧೋರಣೆ ಖಂಡಿಸಿ ಬರುವ ಸೆ. ೪ ರಿಂದ ಹುಕ್ಕೇರಿ ತಹಸೀಲದಾರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಮಾಯಿಸಿದ ಅಂಬೇಡ್ಕರ ಜನಜಾಗೃತಿ ವೇದಿಕೆ, ಛಲವಾದಿ ಮಹಾಸಭಾ ಸೇರಿದಂತೆ ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು, ಸ್ಮಶಾನಭೂಮಿ ಒದಗಿಸುವಲ್ಲಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅವರಗೋಳ ಗ್ರಾಮದ ಸರ್ವೆ ನಂ. ೨೬/೨೩ರಲ್ಲಿನ ೨೦ ಗುಂಟೆ ಜಮೀನನ್ನು ಜಿಲ್ಲಾಧಿಕಾರಿಗಳು ದಲಿತ ಸಮುದಾಯದ ಸ್ಮಶಾನಭೂಮಿಗೆ ಮಂಜೂರಾತಿ ನೀಡಿದ್ದಾರೆ. ಆದರೆ, ದಲಿತರಿಗೆ ಮೀಸಲಾದ ಈ ಜಮೀನನ್ನು ಗ್ರಾಮದ ಕೆಲವರು ಒತ್ತುವರಿ ಮಾಡಿದ್ದಾರೆ. ಒತ್ತುವರಿ ತೆರವುಗೊಳಿಸಿ ಸ್ಮಶಾನಭೂಮಿಗೆ ಚೆಕ್‌ಬಂಧಿ ಹಾಕಿ ಹದ್ದುಬಸ್ತು ಮಾಡಿಕೊಡುವಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ವಿನಾಕಾರಣ ಕುಂಟುನೆಪ ಹೇಳಿ ಕಾಲಹರಣ ಮಾಡುತ್ತಿದ್ದಾರೆ ಎಂದು ದಲಿತರು ದೂರಿದರು.

ದಲಿತರ ಬಹುದಿನಗಳ ಬೇಡಿಕೆ ಈಡೇರಿಸುವಂತೆ ಅಂದಿನ ಸಚಿವ ದಿ.ಉಮೇಶ ಕತ್ತಿ ಅವರು ಸೂಚಿಸಿದರೂ ಅಧಿಕಾರಿಗಳು ಕಿವಿಗೊಡಲಿಲ್ಲ. ಸ್ಮಶಾನಭೂಮಿ ಇಲ್ಲದಿರುವುದರಿಂದ ಮಳೆಗಾಲ ಹಾಗೂ ರಾತ್ರಿ ವೇಳೆಯಲ್ಲಿ ಅಂತ್ಯಸAಸ್ಕಾರಕ್ಕೆ ದಲಿತ ಸಮುದಾಯ ತೀವ್ರ ಪ್ರಯಾಸ ಪಡಬೇಕಿದೆ. ನಿಗದಿಪಡಿಸಿರುವ ಜಮೀನಿಗೆ ತಂತಿಬೇಲಿ ಹಾಕಿ ಸಮುದಾಯಕ್ಕೆ ಹಸ್ತಾಂತರಿಸಬೇಕು ಎಂದು ಅವರು ಒತ್ತಾಯಿಸಿದರು.

ಸ್ಮಶಾನಭೂಮಿ ಖಚಿತಪಡಿಸುವಲ್ಲಿ ತಹಸೀಲದಾರ, ಭೂಮಾಪನ (ಎಡಿಎಲ್‌ಆರ್) ಇಲಾಖೆ, ಸಮಾಜ ಕಲ್ಯಾಣ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಬರುವ ಒಂದು ವಾರದೊಳಗೆ ಸ್ಮಶಾನಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಗಡುವು ವಿಧಿಸಿರುವ ದಲಿತ ಮುಖಂಡರು, ಸಮಸ್ಯೆ ಪರಿಹರಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಛಲವಾದಿ ಮಹಾಸಭಾ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಮಾಜಿ ಸದಸ್ಯ ಬಸವರಾಜ ಕೋಳಿ, ಅಂಬೇಡ್ಕರ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ದಿಲೀಪ ಹೊಸಮನಿ, ಮುಖಂಡರಾದ ಶ್ರೀನಿವಾಸ ವ್ಯಾಪಾರಿ, ಆನಂದ ಖಾತೇದಾರ, ಚಿದಾನಂದ ಹಿರೇಕೆಂಚನ್ನವರ, ನಾಗೇಶ ವಾಳವಿ, ಮಾರುತಿ ಚಿಕ್ಕೋಡಿ, ಕಿರಣ ಕೋಳಿ, ಮಂಜು ಪಡದಾರ, ದಯಾನಂದ ದಿವಾಕರ, ಸುನೀಲ ಖಾತೇದಾರ, ಬಸವರಾಜ ದೇವುಗೋಳ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕೋಡಿ ಜಿಲ್ಲೆ ಘೋಷಿಸಿ ಅಂಬೇಡ್ಕರ ಹೆಸರಿಡಿ
ಭೌಗೋಳಿಕವಾಗಿ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜಿಸಿ ಚಿಕ್ಕೋಡಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಬೇಕು. ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಚಿಕ್ಕೋಡಿ ಜಿಲ್ಲೆ ಮಾಡುವುದು ಅತೀ ಅಗತ್ಯವಿದೆ. ಹೊಸದಾಗಿ ರಚಿಸುವ ಈ ಜಿಲ್ಲೆಗೆ ಅಂಬೇಡ್ಕರ ನಗರ ಜಿಲ್ಲೆ ಎಂದು ಹೆಸರಿಡಬೇಕು. ಚಿಕ್ಕೋಡಿ ಭಾಗದೊಂದಿಗೆ ಬಾಬಾಸಾಹೇಬ ಅಂಬೇಡ್ಕರರು ಅವಿನಭಾವ ನಂಟು ಹೊಂದಿದ್ದರಿAದ ಅವರ ಸ್ಮರಣಾರ್ಥ ಸರ್ಕಾರ ಈ ಕ್ರಮ ಕೈಗೊಳ್ಳಬೇಕು ಎಂದು ಛಲವಾದಿ ಮಹಾಸಭಾ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಆಗ್ರಹಿಸಿದರು. /////