Belagavi News In Kannada | News Belgaum

ಅನಾಥ ಶವಕ್ಕೆ ಚಿಕ್ಕೋಡಿ ಪೊಲೀಸರೇ ಬಂಧು

ಬೆಳಗಾವಿ: ಅನಾರೋಗ್ಯದಿಂದ ಮೃತಪಟ್ಟ ತಂದೆಯ ಅಂತ್ಯಕ್ರಿಯೆಗೆ ವಿದೇಶದಲ್ಲಿರುವ ಮಕ್ಕಳು ಬರದಿರುವದರಿಂದ  ಕೊನೆಗೆ ಚಿಕ್ಕೋಡಿ ಪೊಲೀಸರೇ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮಹಾರಾಷ್ಟ್ರದ ಪುಣೆ ಮೂಲದ 72 ವರ್ಷದ ಚಂದ್ರ ಶರ್ಮಾ ಮೃತ ವೃದ್ಧ. ಮೂಲಚಂದ್ರ ಶರ್ಮಾ ಅವರು ಪಾರ್ಶ್ವವಾಯುವಿಂದ ಬಳಲುತ್ತಿದ್ದರು. ಇವರ ಮಕ್ಕಳು ವಿದೇಶದಲ್ಲಿ ವಾಸವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅವರನ್ನು ಓರ್ವ ವ್ಯಕ್ತಿ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿರುವ ನಾಗರಮುನ್ನೋಳಿ ಕುಂಬಾರ ಆಸ್ಪತ್ರೆಗೆ ಕರೆ ತಂದು, ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ನಂತರ ಆಸ್ಪತ್ರೆಗೆ ಹತ್ತಿರದಲ್ಲಿದ್ದ ಶಿವನೇರಿ ಲಾಡ್ಡ್‌ನಲ್ಲಿ ಮೂಲಚಂದ್ರ ಶರ್ಮಾ ಅವರನ್ನು ವ್ಯಕ್ತಿ ಇರಿಸಿದ್ದನು.
ಈ ವ್ಯಕ್ತಿ ಗುತ್ತಿಗೆ ಆಧಾರದಲ್ಲಿ ಮೂಲಚಂದ್ರ ಶರ್ಮಾರ ಆರೈಕೆ ಮಾಡುತ್ತಿದ್ದನು. ಇದೀಗ ತನ್ನ ಗುತ್ತಿಗೆ ವಾಯಿದೆ ಮುಗಿದ ಬಳಿಕ ಮೂಲಚಂದ್ರ ಶರ್ಮಾರನ್ನು ಲಾಡ್ಡ್‌ನಲ್ಲೇ ಬಿಟ್ಟು ತೆರಳಿದ್ದನು. ಬಳಿಕ ಲಾಡ್ಜ್ ಮ್ಯಾನೇಜರ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ವಿಚಾರಿಸಿದಾಗ ತಾನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಂದು ಮೂಲಚಂದ್ರ ಶರ್ಮಾ ಪರಿಚಯಿಸಿಕೊಂಡಿದ್ದರು.
ನನ್ನ ಮಗ ದಕ್ಷಿಣ ಆಫ್ರಿಕಾದಲ್ಲಿ, ಮಗಳು ಕೆನಡಾದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಪೊಲೀಸರು ಮಕ್ಕಳ ಫೋನ್ ನಂಬರ್ ಪಡೆದು ನಿರಂತರ ಕರೆ ಮಾಡಿದ್ದಾರೆ. ಮಗ ಮತ್ತು ಮಗಳು ಪೊಲೀಸರ ಕರೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಪೊಲೀಸರು ಮೂಲಚಂದ್ರ ಶರ್ಮಾರನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.


ಎರಡು ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೂಲಚಂದ್ರ ಶರ್ಮಾ ಮೃತಪಟ್ಟಿದ್ದಾರೆ. ವಿಷಯ ತಿಳಿಸಲು ಕರೆ ಮಾಡಿದಾಗ ನಮಗೂ ಅವರಿಗೆ ಸಂಬಂಧ ಇಲ್ಲ ಎಂದು ಮಗಳು ಕರೆ ಕಟ್ ಮಾಡಿದ್ದಾರೆ. ಕೊನೆಗೆ ಚಿಕ್ಕೋಡಿ ಪೊಲೀಸರೇ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಚಿಕ್ಕೋಡಿ ಪಿಎಸ್ಐ ಬಸಗೌಡ ನೇರ್ಲಿ, ನಾಗರಮುನ್ನೋಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಂತ್ಯಕ್ರಿಯೆಗೆ ಬಾರದ ಮಕ್ಕಳಿಗೆ ಹಿಡಿಶಾಪ ಹಾಕಿದ್ದಾರೆ.//////