ಹುಕ್ಕೇರಿ ಕೋರ್ಟ್ ಹೊಸ ಕಟ್ಟಡಕ್ಕೆ ರೆಕ್ಕೆಪುಕ್ಕ

ಹುಕ್ಕೇರಿ: ನ್ಯಾಯವಾದಿಗಳು ಮತ್ತು ಕಕ್ಷಿದಾರರ ಬಹುದಿನಗಳ ಬೇಡಿಕೆಯೊಂದು ಈಡೇರುವ ಕಾಲ ಇದೀಗ ಕೂಡಿ ಬಂದಿದ್ದು ಹಲವು ವರ್ಷಗಳ ನ್ಯಾಯವಾದಿಗಳ ಪರಿಶ್ರಮಕ್ಕೆ ಫಲ ಸಿಕ್ಕಂತಾಗಿದೆ. ಪ್ರಕರಣಗಳ ಕೂಲಂಕುಷ ವಿಚಾರಣೆ, ಐತಿಹಾಸಿಕ ತೀರ್ಪುಗಳಿಗೆ ಹೆಸರುವಾಸಿಯಾದ ಹುಕ್ಕೇರಿ ನಗರದ ನ್ಯಾಯಾಂಗ ಇಲಾಖೆಯಲ್ಲಿ ಇದೀಗ ಸಂಭ್ರಮ ನೆಲೆಯೂರಿದೆ.
ಹೊಸ ನ್ಯಾಯಾಲಯ ಸಂಕೀರ್ಣ, ನ್ಯಾಯಾಂಗ ಅಧಿಕಾರಿಗಳ ವಸತಿಗೃಹ ಮತ್ತು ನ್ಯಾಯವಾದಿಗಳ ಬಾರ್ ಅಸೋಸಿಯೇಷನ್ ಕಟ್ಟಡಕ್ಕೆ ಹುಕ್ಕೇರಿ ಹೊರವಲಯದ ಕ್ಯಾರಗುಡ್ ಬಳಿ 5 ಎಕರೆ ಜಮೀನು ಮಂಜೂರಾಗಿದ್ದು ಕಂದಾಯ ಇಲಾಖೆಯಿಂದ ನ್ಯಾಯಾಂಗ ಇಲಾಖೆಗೆ ಈ ಜಮೀನು ಹಂಚಿಕೆಯಾಗಿದೆ. ಇದರಿಂದ ಈ ಭಾಗದ ಜನರಲ್ಲಿ ಹೊಸ ಕನಸು ಚಿಗುರೊಡಿದಿದೆ. ತನ್ಮೂಲಕ ನ್ಯಾಯಾಂಗ ಇಲಾಖೆಯಲ್ಲಿ ಹೊಸ ಶಕೆಯ ಬಾಗಿಲು ತೆರೆಯುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಹಲವು ವಿಶೇಷ, ವೈವಿದ್ಯಗಳಿಗೆ ಸಾಕ್ಷಿಯಾಗಿರುವ ಇಲ್ಲಿನ ನ್ಯಾಯಾಲಯ ಸ್ಥಳಾಂತರಗೊಂಡು ಹೊಸ ಕಟ್ಟಡ ಹೊಂದುವುದು ಬಹುತೇಕ ಪಕ್ಕಾ ಎನ್ನುವುದಕ್ಕೆ ಈಗ ರೆಕ್ಕೆಪುಕ್ಕ ಬಂದಿದೆ. ಇದಕ್ಕೆ ಮೊದಲ ಹೆಜ್ಜೆ ಎನ್ನುವಂತೆ ನೂತನ ಕಟ್ಟಡಕ್ಕೆ ಬೇಕಾದ ಅಗತ್ಯ ಜಾಗೆಯನ್ನು ಸರ್ಕಾರ ಮಂಜೂರು ಮಾಡಿದೆ. ಇದರಿಂದ ನ್ಯಾಯವಾದಿಗಳ ಮೊಗದಲ್ಲಿ ಮಂದಹಾಸ ಮೂಡಿದ್ದು ನಲ್ಮೆಯ ಗೆರೆಗಳು ನಲಿದಾಡುತ್ತಿವೆ.
ಮಾಜಿ ಸಚಿವ ದಿ.ಉಮೇಶ ಕತ್ತಿ ಅವರ ಕನಸಿನ ಯೋಜನೆಗಳಲ್ಲಿ ಒಂದೆನಿಸಿದ ಇಲ್ಲಿನ ನ್ಯಾಯಾಲಯಕ್ಕೆ ಸುಸಜ್ಜಿತ, ಹೊಸ ಕಟ್ಟಡ ಒದಗಿಸಬೇಕೆಂಬ ಪ್ರಯತ್ನವನ್ನು ಅವರ ಪುತ್ರರೂ ಆದ ಕ್ಷೇತ್ರದ ಶಾಸಕ ನಿಖಿಲ್ ಕತ್ತಿ ಮುಂದುವರೆಸಿದ್ದಾರೆ. ಈ ದಿಸೆಯಲ್ಲಿ ಮೊದಲ ಭಾಗವಾಗಿ ಜಮೀನು ಮಂಜೂರು ಮಾಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರವೇ ನ್ಯಾಯಾಲಯ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಗಲಿದೆ.
ಹುಕ್ಕೇರಿ ಹೊರವಲಯದ ಕ್ಯಾರಗುಡ್ ಬಳಿಯ ರಕ್ಷಿ ಗ್ರಾಮದ ಗಾಯರಾಣ ರಿಸನಂ 165ರ ಕ್ಷೇತ್ರ 80 ಎಕರೆ 9 ಗುಂಟೆ ಜಮೀನಿನ ಪೈಕಿ 5 ಎಕರೆ ಜಮೀನನ್ನು ಹುಕ್ಕೇರಿ ನ್ಯಾಯಾಲಯ ಸಂಕೀರ್ಣ, ನ್ಯಾಯಾಂಗ ಅಧಿಕಾರಿಗಳ ವಸತಿ ಗೃಹ ಮತ್ತು ನ್ಯಾಯವಾದಿಗಳ ಬಾರ್ ಅಸೋಸಿಯೇಷನ್ ಕಟ್ಟಡಕ್ಕಾಗಿ ನ್ಯಾಯಾಂಗ ಇಲಾಖೆಗೆ ಮಂಜೂರಾತಿ ದೊರೆತಿದೆ.
ಕರ್ನಾಟಕ ಭೂ ಕಂದಾಯ ಕಾಯಿದೆ, ಕರ್ನಾಟಕ ಭೂ ಮಂಜೂರಾತಿ ನಿಯಮಗಳಡಿ ಸಾರ್ವಜನಿಕ ಹಿತಾಸಕ್ತಿಯಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಂದಾಯ ಇಲಾಖೆ ಭೂ ಮಂಜೂರಾತಿ-3ರ ಸರ್ಕಾರದ ಅಧೀನ ಕಾರ್ಯದರ್ಶಿ ಜಗದೀಶ ಕೆ. ಅವರು ಜಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದು ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹೆಸರಿಗೆ ಜಮೀನು ಮಂಜೂರು ಮಾಡಲಾಗಿದೆ.
ಈಗಿನ ನ್ಯಾಯಾಲಯವನ್ನು 1963 ರಲ್ಲಿ ಕಟ್ಟಲಾಗಿದ್ದು ತೀರಾ ಹಳೆಯದಾಗಿದೆ. ಮಳೆಗಾಲದಲ್ಲಿ ಸೋರಿಕೆ ಜತೆಗೆ ಶಿಥಿಲಾವಸ್ಥೆ ತಲುಪಿದೆ. ಚಿಕ್ಕ ಚಿಕ್ಕ ಕೊಠಡಿ ಹಿನ್ನಲೆಯಲ್ಲಿ ಕಕ್ಷಿದಾರರು ಮತ್ತು ನ್ಯಾಯವಾದಿಗಳಿಗೆ ತೊಂದರೆಯಾಗುತ್ತಿದೆ. ಪಾರ್ಕಿಂಗ್ ವ್ಯವಸ್ಥೆಗೆ ಅಗತ್ಯ ಜಾಗ ಇಲ್ಲದೇ ಇರುವುದರಿಂದ ನ್ಯಾಯಾಲಯಕ್ಕೆ ಬರುವವರು ಸಾಕಷ್ಟು ಪ್ರಯಾಸಪಡಬೇಕಿದೆ. ಹಾಗಾಗಿ ಹೊರವಲಯದಲ್ಲಿ ಸುಸಜ್ಜಿತ ನ್ಯಾಯಾಲಯ ತಲೆಎತ್ತಿದರೆ ಈ ಎಲ್ಲ ಸಮಸ್ಯೆಗಳು ತಪ್ಪಲಿವೆ ಎಂದು ತರ್ಕಿಸಲಾಗಿದೆ.
— ಕೋಟ್ —
ನ್ಯಾಯವಾದಿಗಳು ಮತ್ತು ಕಕ್ಷಿದಾರರ ಅನುಕೂಲಕ್ಕಾಗಿ ಹೊಸ ಕಟ್ಟಡ ನಿರ್ಮಿಸಿ ನ್ಯಾಯಾಲಯ ಸ್ಥಳಾಂತರಿಸಲು ಯೋಜಿಸಲಾಗಿದೆ. ಇದು ಬಹಳ ದಿನಗಳ ಬೇಡಿಕೆಯಾಗಿದ್ದು ಮಾದರಿ ಕಟ್ಟಡ ನಿರ್ಮಿಸಿ ನ್ಯಾಯಾಂಗ ಇಲಾಖೆಯನ್ನು ಮತ್ತಷ್ಟು ಸದೃಢಗೊಳಿಸಲಾಗುವುದು.
– ನಿಖಿಲ್ ಕತ್ತಿ, ಶಾಸಕರು
— ಕೋಟ್ —
ಹೊಸ ನ್ಯಾಯಾಲಯ ಸಂಕೀರ್ಣ, ನ್ಯಾಯಾಂಗ ಅಧಿಕಾರಿಗಳ ವಸತಿಗೃಹ ಮತ್ತು ನ್ಯಾಯವಾದಿಗಳ ಸಂಘದ ಕಟ್ಟಡಕ್ಕೆ ಜಮೀನು ಮಂಜೂರಾಗಿರುವುದು ಸಂತೋಷದ ವಿಚಾರ. ಇದಕ್ಕೆ ಪೂರಕವಾಗಿ ಶೀಘ್ರವೇ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಬೇಕು.
– ಆರ್.ಪಿ.ಚೌಗಲಾ, ವಕೀಲರ ಸಂಘದ ಅಧ್ಯಕ್ಷರು