Belagavi News In Kannada | News Belgaum

ಕಳ್ಳರೆಂದು ಭಾವಿಸಿ ಮೂವರನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಹಲ್ಲೆ: 10 ಜನರ ವಿರುದ್ಧ ಎಫ್‌ಐಆರ್

ಬೆಳಗಾವಿ: ಕಳ್ಳರೆಂದು ತಪ್ಪಾಗಿ ಭಾವಿಸಿ ಮೂವರು ಯುವಕರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಹಲ್ಲೆ ಮಾಡಿರುವ ಘಟನೆಯೊಂದು ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಜೋಡಕುರಳಿ ಗ್ರಾಮದಲ್ಲಿ ಕಳ್ಳರೆಂದು ಭಾವಿಸಿ ಮೂವರು ಯುವಕರನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಜೋಡಕುರಳಿ ಗ್ರಾಮಕ್ಕೆ ನಾಲ್ವರು ಯುವಕರು ಬಂದಿದ್ದರು. ಈ ವೇಳೆ ಯುವಕರನ್ನು ಯಾರು ಎಂದು ವಿಚಾರಿಸುತ್ತಿದ್ದಾಗ ಸರಿಯಾಗಿ ಮಾಹಿತಿ ನೀಡಿದೇ ಯುವಕನೊಬ್ಬ ಓಡಿ ಹೋಗಿದ್ದಾನೆ.
ಇದನ್ನು ನೋಡಿದ ಗ್ರಾಮಸ್ಥರು ಮೂವರನ್ನು ಹಿಡಿದು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ದೌಡಾಯಿಸಿದ್ದರು. ಬಳಿಕ ಮೂವರು ಯುವಕರ ರಕ್ಷಣೆ ಮಾಡಿ ಬಿಡುಗಡೆಗೊಳಿಸಿದ್ದಾರೆ. ಹಲ್ಲೆಗೊಳಗಾದ ಮೂವರು ಯುವಕರು ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದವರೆಂಬ ಮಾಹಿತಿ ಲಭ್ಯವಾಗಿದೆ. ಯುವಕರ ಮೇಲೆ ಹಲ್ಲೆ ಮಾಡಿದ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.//////