Belagavi News In Kannada | News Belgaum

ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಕ್ಕೆ ಶಾಸಕ ನಿಖಿಲ್ ಕತ್ತಿ ಚಾಲನೆ

ಹುಕ್ಕೇರಿ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು (ಬೆಂಗಳೂರು) ನೀಡುವ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ೩ನೇ ಬಾರಿಗೆ ದೊರೆತಿರುವುದು ಮತ್ತು ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುತ್ತಿರುವುದು ಬ್ಯಾಂಕಿನ ಪ್ರಗತಿಯ ಸಂಕೇತ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕಿನ 79ನೇ ವಾರ್ಷಿಕ ಸಭೆಯಲ್ಲಿ ಆಡಳಿತ ಮಂಡಳಿ ನೀಡಿದ ಸತ್ಕಾರ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿ, ದುಡಿಯುವ ಬಂಡವಾಳ ೪೪೦ ಕೋಟಿ ಇರುವುದನ್ನು ೧೦೦೦ ರಿಂದ ೧೫೦೦ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿರುವ ಸ್ಪಾರ್ಟ್ ಅಪ್ ಯೋಜನೆಗೆ ಹೆಚ್ಚಿನ ಹಣಕಾಸು ನೆರವು ನೀಡಿ ಪ್ರಗತಿಗೆ ಪೂರಕವಾಗಲು ಸಲಹೆ ನೀಡಿದರು.
ಅಧ್ಯಕ್ಷ ಪವನ್ ಕತ್ತಿ ಮಾತನಾಡಿ, ಕಳೆದ ವರ್ಷ ಬ್ಯಾಂಕ್ ೨.೨೫ ಕೋಟಿ ನಿವ್ವಳ ಲಾಭ ಹೊಂದಿ ಪ್ರಗತಿಯಲ್ಲಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಶಾಖೆ ತೆರೆಯುವ, ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.
ಉಪಾಧ್ಯಕ್ಷ ಆರ್.ಬಿ.ಮುನ್ನೋಳಿ, ನಿರ್ದೇಶಕರಾದ ಡಾ.ಎಂ.ಎಸ್.ಮುನ್ನೋಳಿ, ಆರ್.ಟಿ.ಶಿರಾಳಕರ, ಎಂ.ಪಿ.ಖೆಮಲಾಪುರೆ, ವಿ.ಎಸ್.ಹಾಗರಗಿ, ಮುರುಗೇಶ ಕತ್ತಿ, ಎಂ.ಎನ್.ಶ್ರೀಖಂಡೆ, ವಿಜಯಲಕ್ಷಿ್ಮೀ ಶೆಟ್ಟಿ, ಸಂಜೀವಿನಿ ತೇರದಾಳ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ವ್ಯವಸ್ಥಾಪಕ ಶ್ರೀಶೈಲ ಚರಾಟೆ ಸ್ವಾಗತಿಸಿದರು. ಆಡಳಿತ ಸಲಹೆಗಾರ ಮಕಬುಲ್ ಅಮ್ಮಣಗಿ ವರದಿ ವಾಚಿಸಿದರು. ಪ್ರಧಾನ ವ್ಯವಸ್ಥಾಪಕ ಸುನೀಲ ಬೆಲ್ಲದ ನಿರೂಪಿಸಿದರು. ನಿರ್ದೇಶಕ ಕೆ.ಎಸ್.ಕತ್ತಿ ವಂದಿಸಿದರು../////